ಕಾಶ್ಮೀರದಲ್ಲಿ ಪಾಕ್‌ಗೆ ಯಾವುದೇ ಸ್ಥಾನಾಧಿಕಾರವಿಲ್ಲ: ರಾಜನಾಥ್ ಸಿಂಗ್

Update: 2019-08-29 18:13 GMT

ಲೇಹ್, ಆ.29: ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿ ಯಾವುದೇ ಸ್ಥಾನಾಧಿಕಾರವಿಲ್ಲ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಈಗಿನ ವಿಷಯದಲ್ಲಿ ಯಾವುದೇ ರಾಷ್ಟ್ರಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಭಯೋತ್ಪಾದಕರಿಗೆ ನೆರವು ನೀಡಿ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನ ನಿಲ್ಲಿಸುವವರೆಗೆ ಪಾಕ್‌ನೊಂದಿಗೆ ಮಾತುಕತೆ ಸಾಧ್ಯವಿಲ್ಲ. ಕಾಶ್ಮೀರ ವಿಷಯವನ್ನು ಅಂತರಾಷ್ಟ್ರೀಕರಣಗೊಳಿಸುವ ಪ್ರಯತ್ನದಲ್ಲಿ ಪಾಕ್ ವಿಫಲವಾಗಿ ಮತ್ತೆ ಮತ್ತೆ ಮುಖಭಂಗ ಅನುಭವಿಸುತ್ತಿದೆ . ತನ್ನೊಂದಿಗೆ ಫೋನ್‌ನಲ್ಲಿ ಮಾತನಾಡಿದ ಅಮೆರಿಕದ ರಕ್ಷಣಾ ಸಚಿವ ಮಾರ್ಕ್ ಎಸ್ಪರ್ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದು ಭಾರತದ ಆಂತರಿಕ ವಿಷಯವಾಗಿದೆ ಎಂದಿದ್ದಾರೆ. ಭಾರತವು ಪಾಕ್‌ನೊಂದಿಗೆ ಉತ್ತಮ ನೆರೆಹೊರೆ ಸಂಬಂಧ ಮುಂದುವರಿಸಲು ಬಯಸುತ್ತದೆ. ಆದರೆ ಮೊದಲು ಅವರು ಭಾರತಕ್ಕೆ ಉಗ್ರರನ್ನು ರವಾನಿಸುವುದನ್ನು ಬಿಡಬೇಕು ಎಂದು ಸಿಂಗ್ ಹೇಳಿದರು.

ಕಾಶ್ಮೀರ ಯಾವತ್ತು ನಿಮ್ಮದಾಗಿತ್ತು ಎಂಬ ಪ್ರಶ್ನೆಯನ್ನು ಪಾಕಿಸ್ತಾನಕ್ಕೆ ಕೇಳಬಯಸುತ್ತೇನೆ. ಕಾಶ್ಮೀರ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅವಿಭಾಜ್ಯ ಅಂಗವಾಗಿಯೇ ಇರಲಿದೆ ಎಂದವರು ಹೇಳಿದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ ಮತ್ತು ದೌರ್ಜನ್ಯಗಳನ್ನು ತಡೆಯುವತ್ತ ಮೊದಲು ಪಾಕಿಸ್ತಾನ ಗಮನ ಹರಿಸಲಿ ಎಂದು ರಾಜನಾಥ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News