ಮೈತ್ರಿ ಸರ್ಕಾರ ಪತನಕ್ಕೆ ಸಿದ್ದು-ದೇವೇಗೌಡ ಕಾರಣ: ಅನರ್ಹ ಶಾಸಕ ಎಂಟಿಬಿ ನಾಗರಾಜ್

Update: 2019-08-29 18:24 GMT

ಕೋಲಾರ, ಆ.29: ಮೈತ್ರಿ ಸರ್ಕಾರ ಬೀಳಲು ಸಿದ್ದು ಹಾಗೂ ದೇವೇಗೌಡ ಕಾರಣ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಆರೋಪಿಸಿದರು.

ಕೋಲಾರದಲ್ಲಿ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒಬ್ಬನೇ ಸತ್ಯ ಹರಿಶ್ಚಂದ್ರ ಅಂದುಕೊಂಡಿದ್ದಾರೆ. ಹರಿಶ್ಚಂದ್ರನಂತೆ ಮಾತನಾಡುತ್ತಾನೆ ಅಷ್ಟೆ. ಸತ್ಯ ಹರಿಶ್ಚಂದ್ರನಾಗಿದ್ದರೆ ಮುನಿಯಪ್ಪ ಅವರನ್ನೇಕೆ ಸೋಲಿಸಿದರು ? ಕಾಂಗ್ರೆಸ್‍ಗೆ ತತ್ವ ಸಿದ್ದಾಂತ ಇದ್ದರೆ, ಮೊದಲು ಪಕ್ಷದಿಂದ ರಮೇಶ್ ಕುಮಾರ್ ಅವರನ್ನು ಉಚ್ಚಾಟನೆ ಮಾಡಬೇಕು. ಮುನಿಯಪ್ಪ ಸೋಲುವುದಕ್ಕೆ ರಮೇಶ್ ಕುಮಾರ್ ಅವರೇ ಕಾರಣ ಎಂದು ದೂರಿದರು.

ಕಾಂಗ್ರೆಸ್ ರಾಜ್ಯದಲ್ಲಿ ನೆಲ ಕಚ್ಚಲು ಮುಖಂಡರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು ಹಾಗೂ ಸ್ವಾರ್ಥ ರಾಜಕಾರಣವೇ ಕಾರಣ‌. ನಾನು ನಿಷ್ಟಾವಂತ ಕಾಂಗ್ರೇಸಿಗ, ನನ್ನ ಬಗ್ಗೆ ಸುಳ್ಳು ಅರೋಪಗಳು ಮಾಡಿದರೆ ಇವರ ವಿಷಯ ಬಿಚ್ಚಿಡಬೇಕಾಗುತ್ತದೆ. ಇವರ ಕಥೆಗಳನ್ನ ಹೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದರು.

ನಾವು ಮೂಲ ಕಾಂಗ್ರೇಸಿಗರು, ನಮ್ಮ ಬಗ್ಗೆ ಮಾತನಾಡುವ ಇವರು ಅಧಿಕಾರಕ್ಕಾಗಿ ಕಾಂಗ್ರೆಸ್‍ಗೆ ಬಂದವರು. ನಾವು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಇವರು ಸಂಸಾರ ಮಾಡುತ್ತಿದ್ದಾರೆ. ಇವರ ಆಡಳಿತ ಅಧಿಕಾರ ಇದ್ದಾಗ ಎಷ್ಟು ಪ್ರಮಾಣಿಕವಾಗಿ ಆಡಳಿತ ಮಾಡಿದ್ದಾರೆಂದು ನಾನು ಹೇಳುವೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಏನು ಮಾಡಲಾಗುತ್ತಿಲ್ಲ, ಕುಮಾರಸ್ವಾಮಿ ಹಾಗೂ ರೇವಣ್ಣ ನನ್ನ ವಸತಿ ಖಾತೆಯಲ್ಲಿ ಮೂಗು ತೂರಿಸುತ್ತಿದ್ದಾರೆ, ಹೀಗಾಗಿ ರಾಜಿನಾಮೆ ನೀಡುತ್ತೇನೆ ಎಂದು ಮೂರು ಬಾರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ ಎಂದ ಅವರು, ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಬಂದು ನನ್ನ ಕ್ಷೇತ್ರದಲ್ಲಿ ತೊಡೆ ತಟ್ಟಲಿ. ಇಂತಹ ತೊಡೆ ತಟ್ಟುವವರನ್ನು ನಾನು ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹೇಳುತ್ತೇನೆ ಎಂದರು.

ಮದ್ಯಂತರ ಚುನಾವಣೆ ಸದ್ಯಕ್ಕೆ ಬರುವುದಿಲ್ಲ. ಕೇಂದ್ರದಲ್ಲಿ ಸ್ಥಿರವಾದ ಸರ್ಕಾರ ಇದೆ, ರಾಜ್ಯದಲ್ಲಿ ಈಗ ಪ್ರಾರಂಭವಾಗಿದೆ. ಕಾಂಗ್ರೆಸ್ ನವರು ಮಧ್ಯಂತರ ಚುನಾವಣೆ ಬರುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News