ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ: ಸರಕಾರ ಶೀಘ್ರ ಸ್ಥಳ ಗುರುತಿಸಿಕೊಡಲು ಸುಧಾಮೂರ್ತಿ ಮನವಿ

Update: 2019-08-30 18:32 GMT

ಗದಗ, ಆ.30: ಸರಕಾರ ಎಷ್ಟು ಬೇಗ ಜಾಗ ಗುರುತಿಸಿ ಕೊಡುತ್ತದೆಯೋ, ಅಷ್ಟೇ ಬೇಗ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತೇವೆ ಎಂದು ಇನ್ಫೋಸಿಸ್ ಫೌಂಡೇಷನ್‌ನ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.

ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಭೇಟಿ ಮಾಡಿದರು. ಇಲ್ಲಿನ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ನಂತರ ಜಿಲ್ಲಾಡಳಿತದಿಂದ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ಗಳನ್ನು ವೀಕ್ಷಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ 10 ಕೋಟಿ ರೂಪಾಯಿ ಘೋಷಣೆ ಮಾಡಿದ್ದೇವೆ. ಆ ಮೊತ್ತದಲ್ಲಿ ಸಂತ್ರಸ್ತರಿಗೆ ಹೊಸ ಮನೆ ಕಟ್ಟಿಸಿಕೊಡುವ ಸದುದ್ದೇಶ ಹೊಂದಲಾಗಿದೆ. ಈಗಾಗಲೇ ಇದರ ಹೊರತಾಗಿ ಐದು ಕೋಟಿ ರೂಪಾಯಿ ಮೊತ್ತದಲ್ಲಿ ಸಂತ್ರಸ್ತರಿಗೆ ದಿನನಿತ್ಯದ ಸಾಮಗ್ರಿಗಳ ಕಿಟ್ ತಯಾರಿಸಿ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ನೆರೆ ಸಂತ್ರಸ್ತರಿಗಾಗಿ ಬಟ್ಟೆ ಮತ್ತು ಜಾನುವಾರಗಳಿಗೆ ನಾಲ್ಕು ಲಾರಿಗಳಷ್ಟು ಮೇವು ವಿತರಣೆ ಮಾಡಲಾಗಿದೆ ಎಂದ ಅವರು, ಪದೇ ಪದೇ ಪ್ರವಾಹಕ್ಕೊಳಗಾಗುವ ಇಂತಹ ಗ್ರಾಮಗಳನ್ನು ಸರಕಾರ ಗುರುತಿಸಿ ಬೇರೆ ಕಡೆ ಸ್ಥಳಾಂತರಿಸಬೇಕು. ಅಲ್ಲದೇ ನಮ್ಮ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಈಗಾಗಲೇ ಹಲವು ನೆರೆಪೀಡಿತ ಪ್ರದೇಶಗಳಲ್ಲಿ ನೂತನ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಅದೇ ರೀತಿ ಗದಗ ಜಿಲ್ಲೆಯಲ್ಲೂ ಪ್ರವಾಹ ಪೀಡಿತರಿಗೆ ಮನೆಗಳನ್ನು ಕಟ್ಟಿಕೊಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News