‘ಕಾವೇರಿ ಕೂಗು’ ಅಭಿಯಾನಕ್ಕೆ ಸೆ.3 ರಂದು ಚಾಲನೆ : 72 ಕೋಟಿ ಮರಗಳನ್ನು ಬೆಳೆಸುವ ಗುರಿ

Update: 2019-08-31 19:02 GMT

ಮಡಿಕೇರಿ, ಆ.31 :ಕಾವೇರಿ ನದಿಯ ಪುನಶ್ಚೇತನಕ್ಕಾಗಿ ಈಶಾ ಫೌಂಡೇಶನ್‍ನ ಸಂಸ್ಥಾಪಕರಾದ ಸದ್ಗುರು ಆರಂಭಿಸಿರುವ ‘ಕಾವೇರಿ ಕೂಗು’ ಅಭಿಯಾನದ ಮೂಲಕ ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 72 ಕೋಟಿ ಮರಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಫೌಂಡೇಶನ್‍ನ ಸ್ವಯಂ ಸೇವಕರಾದ ಸುಬ್ರಹ್ಮಣ್ಯ ಬಿ.ಎಸ್. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿಯ ಉಳಿವಿಗಾಗಿ ಅರಣ್ಯ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾವೇರಿ ಕೂಗು ಅಭಿಯಾನವನ್ನು ಆರಂಭಿಸಲಾಗಿದ್ದು, ಸೆ.3 ರಂದು ತಲಕಾವೇರಿಯಲ್ಲಿ ಬೈಕ್ ಜಾಥಾ ಆರಂಭಗೊಳ್ಳಲಿದೆ ಎಂದರು.

ಅಂದು ಸದ್ಗುರುಗಳು ತಲಕಾವೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಮಧ್ಯಾಹ್ನ 3.30 ಗಂಟೆಗೆ ಮಡಿಕೇರಿಯ ಕ್ರಿಸ್ಟಲ್ ಹಾಲ್‍ನಲ್ಲಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸೆ.4 ರಂದು ಹುಣಸೂರು, ಸೆ.5 ರಂದು ಮೈಸೂರು, ಸೆ.6 ರಂದು ಮಂಡ್ಯ ಹಾಗೂ ಬೆಂಗಳೂರು ಅರಮನೆ ಮೈದಾನದಲ್ಲಿ ಸೆ.8 ರಂದು ಕಾರ್ಯಕ್ರಮ ನಡೆಯಲಿದೆ ಎಂದರು.

ತಲಕಾವೇರಿಯಿಂದ ಆರಂಭಗೊಂಡ ಜಾಗೃತಿ ಅಭಿಯಾನ ಪೂಂಪುಹಾರ್‍ವರೆಗೆ ನಡೆಯಲಿದ್ದು, ದಾರಿಯುದ್ದಕ್ಕೂ ಸದ್ಗುರುಗಳು ಸಾರ್ವಜನಿಕರಿಗೆ ಕಾವೇರಿ ಕೂಗು ಬಗ್ಗೆ ತಿಳಿಸಿಕೊಡಲಿದ್ದಾರೆ ಎಂದು ಸುಬ್ರಹ್ಮಣ್ಯ ತಿಳಿಸಿದರು. ಅಭಿಯಾನದ ಮೂಲಕ ಅರಣ್ಯ ಕೃಷಿಗೆ ಉತ್ತೇಜನ ನೀಡಿ ಮರಗಳನ್ನು ಬೆಳೆಸುವುದನ್ನು ರೈತರು ತಮ್ಮ ಕೃಷಿಯ ಒಂದು ಭಾಗವನ್ನಾಗಿ ಮಾರ್ಪಡಿಸಿಕೊಳ್ಳಲು ಮನವೊಲಿಸಲಾಗುವುದು. ಆ ಮೂಲಕ ರೈತರು ಆದಾಯ ಗಳಿಸುವ ಬಗ್ಗೆ ಜಾಗೃತಿ ಮೂಡಿಸಿ ಮರಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಅಂತರ್ಜಲದ ಬಲವನ್ನು ವೃದ್ಧಿಸುವ ಕಾರ್ಯವನ್ನು ಈಶ ಫೌಂಡೇಶನ್ ಮಾಡಲಿದೆ ಎಂದರು.

ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳಿಗೆ ಸೇರಿದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುಮಾರು 242 ಕೋಟಿ ಮರಗಳನ್ನು ನೆಟ್ಟು ಬೆಳೆಸುವುದಕ್ಕೆ ರೈತರನ್ನು ಸಶಕ್ತಗೊಳಿಸಲಾಗುವುದು. ಈ ಅರಣ್ಯೀಕರಣದ ವಿಶಿಷ್ಟತೆ ಎಂದರೆ ಸ್ಥಳೀಯ ನೀರು, ಮಣ್ಣು ಮತ್ತು ಹವಾಗುಣಗಳಿಗೆ ಸೂಕ್ತವಾಗಿ ಹೊಂದುವ ವಿವಿಧ ಪ್ರಭೇದಗಳ ಸಸಿಗಳನ್ನು ಆರಿಸಲಾಗುವುದು ಮತ್ತು ಅವುಗಳ ವಾಣಿಜ್ಯ ಮೌಲ್ಯವನ್ನು ಪರಿಗಣಿಸಲಾಗುವುದು. ಈ ರೀತಿಯ ಅರಣ್ಯ ಕೃಷಿ ಪದ್ಧತಿಯಿಂದ 5 ರಿಂದ 7 ವರ್ಷಗಳಲ್ಲಿ ರೈತರ ಆದಾಯ ಮೂರರಿಂದ ಎಂಟು ಪಟ್ಟು ಹೆಚ್ಚಾಗುತ್ತದೆ. ಈ ಮಾದರಿಯನ್ನು ಈಶ ಫೌಂಡೇಶನ್ ಈಗಾಗಲೆ ತಮಿಳುನಾಡಿನ 69 ಸಾವಿರ ರೈತರ ಮೂಲಕ ಯಶಸ್ವಿಯಾಗಿ ಸಾಬೀತುಪಡಿಸಿದೆ ಎಂದು ಸುಬ್ರಹ್ಮಣ್ಯ ತಿಳಿಸಿದರು.

ಕಾವೇರಿ ಕೂಗು ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಅರಣ್ಯ ಕೃಷಿ ಮಾದರಿಯಿಂದ ಉಂಟಾಗುವ ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಡಲಾಗುತ್ತದೆ. ಈ ರೀತಿ ಮರಗಳನ್ನು ಬೆಳೆಸುವುದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ನದಿ ನೀರಿನ ಪ್ರಮಾಣವನ್ನು ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಮಾಡಬಹುದು. ಈ ರೀತಿ ನದಿ ನೀರು ನಿರಂತರವಾಗಿ ಏರಿಕೆಯಾಗುವುದರಿಂದ ತಾಯಿ ಕಾವೇರಿ ತನ್ನ ಹಿಂದಿನ ವೈಭವವನ್ನು ಪಡೆದುಕೊಳ್ಳಲಿದ್ದಾಳೆ ಎಂದು ಅವರು ಅಭಿಪ್ರಾಯಪಟ್ಟರು.

ಈಗಾಗಲೆ 5 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಅಭಿಯಾನದ ತಂಡ ತಲುಪಿದ್ದು, 2.70 ಲಕ್ಷ ರೈತರ ಬಳಿ ಹೋಗಿ ಚರ್ಚಿಸಲಾಗಿದೆಯೆಂದು ಸುಬ್ರಹ್ಮಣ್ಯ ಹೇಳಿದರು.  ಈ ಅಭಿಯಾನಕ್ಕಾಗಿ ಅಗತ್ಯವಿರುವ ಸಸಿಗಳನ್ನು ನೆಟ್ಟು ಹಂಚಿಕೆ ಮಾಡುವುದಕ್ಕೆ ಪೂರಕವಾಗಿ ಆಸಕ್ತ ಕೃಷಿಕರು ತಮ್ಮ ಜಮೀನನ್ನು ಬಳಸಿಕೊಳ್ಳಬಹುದಾಗಿದೆ. ಅರಣ್ಯೀಕರಣ ಕಾರ್ಯದಲ್ಲಿ ಕೈಜೋಡಿಸಬಹುದೆಂದು ತಿಳಿಸಿದರಲ್ಲದೆ, ಯೋಜನೆಯಲ್ಲಿ ಆಸಕ್ತರಾಗಿರುವ ಕೃಷಿಕರು ಪ್ರತಿ ಗಿಡಕ್ಕೆ 42 ರೂ.ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕಾವೇರಿ ಕೂಗು ಅಭಿಯಾನಕ್ಕಾಗಿ ನದಿಗಳನ್ನು ರಕ್ಷಿಸಿ ಮಂಡಳಿಯನ್ನು ರಚಿಸಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಬಯೋಕಾನ್ ಸಂಸ್ಥೆಯ ಸಿಎಂಡಿ ಕಿರಣ್ ಮಜುಮ್‍ದಾರ್ ಷಾ, ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರುಜಿತ್ ಪಸಾಯತ್, ವಲ್ರ್ಡ್ ವೈಲ್ಡ್ ಲೈಫ್ ಫಂಡ್‍ನ ಸಿಇಒ ರವಿ ಸಿಂಗ್, ಜಲ ಸಂಪನ್ಮೂಲ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಶಶಿ ಶೇಖರ್, ಕೃಷಿ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಪ್ರವೇಶ್ ಶರ್ಮ, ರಾಜ್ಯ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ನರಸಿಂಹ ರಾಜು, ಅಭಿಯಾನದ ಸಂಯೋಜಕ ಯೂರಿ ಜೈನ್ ಹಾಗೂ ಟಾಟಾ ಇಂಟರ್‍ನ್ಯಾಷನಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಬಿ. ಮುತ್ತು ರಾಮನ್ ಸದಸ್ಯರುಗಳಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಸುಬ್ರಹ್ಮಣ್ಯ ಮಾಹಿತಿ ನೀಡಿದರು.

ಅರಣ್ಯ ಕೃಷಿಯಿಂದ ರೈತರು ತಾವು ಬೆಳೆದ ಮರಗಳಿಂದ ಆದಾಯವನ್ನು ಹೊಂದಿಕೊಳ್ಳಬಹುದು ಎನ್ನುವುದು ಕಾವೇರಿ ಕೂಗು ಅಭಿಯಾನದ ಮೂಲಕ ಜನರಿಗೆ ತಿಳಿಸುತ್ತಿದ್ದೀರ. ಆದರೆ, ಕೊಡಗಿನಲ್ಲಿ ತೋಟದ ಮಾಲೀಕರು ಬೆಳೆದ ಮರ ಕಟಾವಿಗೆ ಅಡಚಣೆಯನ್ನು ಎದುರಿಸುತ್ತಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣ್ಯ, ತೋಟದಲ್ಲಿರುವ ಮರದ ಹಕ್ಕು ತೋಟದ ಮಾಲೀಕರಿಗೆ ಸಿಗಬೇಕು. ಈ ಬಗ್ಗೆ ಕಾನೂನು ಮಾರ್ಪಾಡು ಮಾಡುವ ಅಗತ್ಯವಿದ್ದು, ಸಂಸ್ಥೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸ್ವಯಂ ಸೇವಕರಾದ ಋಷಬ್ ಹಾಗೂ ಲತಾ ಕೃಷ್ಣಮೋಹನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News