ಅಪಘಾತದಿಂದ ಗಾಯಗೊಂಡ ವ್ಯಕ್ತಿಗೆ ಮೊಬೈಲ್ ಬೆಳಕಲ್ಲೇ ಹೊಲಿಗೆ ಹಾಕಿದ ವೈದ್ಯರು!

Update: 2019-09-01 09:12 GMT
Photo: ANI 

ಫಿರೋಝಾಬಾದ್, ಸೆ.1: ಉತ್ತರ ಪ್ರದೇಶ ರಾಜ್ಯದ ಆಸ್ಪತ್ರೆಗಳ ಸ್ಥಿತಿಗತಿಯನ್ನು ಅಣಕಿಸುವ ರೀತಿಯ ಘಟನೆಯೊಂದು ರವಿವಾರ ಬಹಿರಂಗವಾಗಿದೆ. ಅಪಘಾತದಿಂದ ಗಾಯಗೊಂಡ ವ್ಯಕ್ತಿಯೊಬ್ಬರಿಗೆ ಮೊಬೈಲ್‍ ನ ಫ್ಲ್ಯಾಷ್ ಬೆಳಕಿನಲ್ಲೇ ಶಿಕೊಹಾಬಾದ್ ಜಿಲ್ಲಾ ಆಸ್ಪತ್ರೆಯ ವೈದ್ಯರು ಹೊಲಿಗೆ ಹಾಕಿದ ಫೋಟೊಗಳು ಈಗ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ವಿದ್ಯುತ್ ಅಥವಾ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ವೈದ್ಯರು ಅನಿವಾರ್ಯವಾಗಿ ಈ ಕ್ರಮ ಅನುಸರಿಸಬೇಕಾಯಿತು.

ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯ ವೈದ್ಯರೊಬ್ಬರು ಹೇಳುವಂತೆ ಆಸ್ಪತ್ರೆಗೆ ಅಳವಡಿಸಿದ ಇನ್‍ ವರ್ಟರ್ ಚಾರ್ಜ್ ಮುಗಿದಿತ್ತು. ಆದ್ದರಿಂದ ಮೊಬೈಲ್ ಫೋನ್ ಫ್ಲ್ಯಾಷ್ ದೀಪ ಬಳಸಿಕೊಂಡೇ ಹೊಲಿಗೆ ಹಾಕಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರೋಗಿಯ ಮಗ ಮನೋಜ್ ಕುಮಾರ್ ಹೇಳುವಂತೆ, "ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡ ತಂದೆಯನ್ನು ಇಲ್ಲಿಗೆ ಕರೆತಂದೆವು. ಆಸ್ಪತ್ರೆ ಸಿಬ್ಬಂದಿ ಫೋನ್ ಬೆಳಕಿನಲ್ಲೇ ಹೊಲಿಗೆ ಹಾಕಬೇಕಾಯಿತು. ನಾವು ಬಂದಾಗ ವೈದ್ಯರು ಇರಲಿಲ್ಲ"

ಡಾ.ಅಭಿಷೇಕ್ ಎಂಬವರು ರೋಗಿಗೆ ಚಿಕಿತ್ಸೆ ನೀಡಿದರು. ಈ ಘಟನೆ ಬಗ್ಗೆ ಮುಖ್ಯ ವೈದ್ಯಾಧಿಕಾರಿಗೆ ವರದಿ ನೀಡುವುದಾಗಿ ಅವರು ಹೇಳಿದರು. ಅಂಥ ಸ್ಥಿತಿಯಲ್ಲಿ ತಾವು ಅಸಹಾಯಕರಾಗಿದ್ದುದಾಗಿ ಸಮರ್ಥಿಸಿಕೊಂಡರು. ಮತ್ತೊಬ್ಬ ವೈದ್ಯರ ಮೊಬೈಲ್ ಫೋನ್ ಬೆಳಕಿನಲ್ಲಿ ವೈದ್ಯರು ಹೊಲಿಗೆ ಹಾಕಿದರು ಎಂದು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News