ಸಿ.ಟಿ.ರವಿ-ಪ್ರಹ್ಲಾದ್ ಜೋಶಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ

Update: 2019-09-01 17:54 GMT

ದಾವಣಗೆರೆ: ಕನ್ನಡ ಬಾವುಟದ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮತ್ತು ಕೋಲ್ಕತ್ತಾ, ಒರಿಸ್ಸಾ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಅಲ್ಲಿನ ಸಚಿವರ, ಸಂಸದರು ಸ್ಥಳೀಯ ಭಾಷೆಗೆ ಮತ್ತು ಅವರು ಬಳಸುವ ಬಾವುಟಕ್ಕೆ ಗೌರವ ಕೊಡುತ್ತಾರೆ. ಆದರೆ ಇಲ್ಲಿನ ಸಚಿವರು ಕರ್ನಾಟಕದಲ್ಲಿದ್ದು, ಕನ್ನಡಿಗರ ಮತ ಪಡೆದು, ಕನ್ನಡಕ್ಕೆ ದ್ರೋಹ ಬಗೆಯುತ್ತಾರೆ. ಕನ್ನಡದ ಬಗ್ಗೆ ಅಸಂಬಂಧ ಹೇಳಿಕೆ ನೀಡಿರುವ ರಾಜ್ಯ ಸಚಿವ ಸಿ.ಟಿ.ರವಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕವೂ ಒಂದು. ಕರ್ನಾಟಕದಿಂದ ಭಾರತ ಹೊರತು, ಭಾರತದಿಂದ ಕರ್ನಾಟಕ ಅಲ್ಲ. ಕರ್ನಾಟಕಕ್ಕೆ ತನ್ನದೇ ಆದ ಇತಿಹಾಸ, ಸಂಸ್ಕøತಿ, ಸಂಸ್ಕಾರ ಹೊಂದಿದೆ. ಆದರೆ ಇದನ್ನು ಅರಿಯದೆ ಸಚಿವರು ಇಂತಹ ಅಸಂಬಂಧ ಹೇಳಿಕೆ ನೀಡುತ್ತಾರೆ. ಭಾರತ ಸಂವಿಧಾನದಲ್ಲಾಗಲಿ, ಫ್ಲಾಗ್ ಕೋಡ್ ಆಫ್ ಇಂಡಿಯಾದಲ್ಲಾಗಲಿ ರಾಜ್ಯಗಳು ತಮ್ಮ ಧ್ವಜವನ್ನು ಹೊಂದಬಾರದು ಎಂದು ಹೇಳಿಲ್ಲ. ಕರ್ನಾಟಕ ಧ್ವಜ ಹೊಂದಲು ಸಂಪೂರ್ಣ ಸ್ವತಂತ್ರವಿದೆ. ಹಳದಿ-ಕೆಂಪು ಬಾವುಟ ಎಂದು ಕನ್ನಡಿಗರಿಗೆ ಕೇವಲ ಸಂಕೇತ ಮಾತ್ರವಾಗಿ ಉಳಿದಿಲ್ಲ. ಅದು ಕನ್ನಡಿಗರನ್ನು ಧರ್ಮಾತೀತ, ಜಾತ್ಯತೀತವಾಗಿ ಒಂದು ಸಮುದಾಯ ಒಟ್ಟುಗೂಡಿಸಿ ಹಲವು ರಾಷ್ಟ್ರಗಳ ಒಕ್ಕೂಟವಾದ ಭಾರತದಲ್ಲಿ ಕರ್ನಾಟಕವೆಂಬ ಅಂಗವನ್ನು ಬಲಪಡಿಸಿ ಬೆಳೆಸುತ್ತಿರುವ ಒಂದು ಸಾಧನವಾಗಿ ರೂಪುಗೊಂಡಿದೆ. ಹೀಗಾಗಿ ಕನ್ನಡ ಬಾವುಟ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವುದನ್ನು ಬಿಟ್ಟು ಸಾಂವಿಧಾನಿಕ ಮಾನ್ಯತೆ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿ.ಮಲ್ಲಿಕಾರ್ಜುನ, ಎ.ಎಚ್.ತಿಮ್ಮೇಶ್, ಎಸ್. ಅಲಿ, ಜಿ.ರಮೇಶ್, ಮಂಜುಳಾ, ದೇವರಮನೆ ಗೋಪಾಲ, ವಿಜೇಂದ್ರ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News