ಗರಿಷ್ಠ ಮಟ್ಟ ತಲುಪಿದ ಲಿಂಗನಮಕ್ಕಿ ಜಲಾಶಯ: ಜೋಗ್ ಜಲಪಾತದಲ್ಲಿ ಕಳೆಗಟ್ಟಿದ ಜಲಧಾರೆಯ ವೈಭವ

Update: 2019-09-03 18:57 GMT

ಶಿವಮೊಗ್ಗ, ಆ. 3: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ, ಏಷ್ಯಾ ಖಂಡದಲ್ಲಿಯೇ ಅತೀ ಕಡಿಮೆ ವೆಚ್ಚದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡುವ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ಲಿಂಗನಮಕ್ಕಿ ಡ್ಯಾಂ ಗರಿಷ್ಠ ಮಟ್ಟಕ್ಕೆ ತಲುಪಿದೆ. ಮಂಗಳವಾರ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ತೆರೆದು ನೀರು ಹೊರ ಬಿಡಲಾಗುತ್ತಿದೆ. ಇದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ಜಲಧಾರೆಯಿಂದ ಭೋರ್ಗರೆಯಲಾರಂಭಿಸಿದೆ.

ಕಳೆದೆರೆಡು ದಿನಗಳಿಂದ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಡ್ಯಾಂನ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಡ್ಯಾಂನ ನೀರಿನ ಮಟ್ಟ 1818.90 (ಗರಿಷ್ಠ ಮಟ್ಟ : 1819) ಅಡಿಯಿದೆ. 38,673 ಕ್ಯೂಸೆಕ್ ಒಳಹರಿವಿದ್ದು, 15,993 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 68.40 ಮಿಲಿ ಮೀಟರ್ (ಮಿ.ಮೀ.) ಮಳೆಯಾಗಿದೆ.

ಡ್ಯಾಂನ ವಿವರ: 151.75 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. 1964 ರಲ್ಲಿ ನಿರ್ಮಾಣವಾದ ಲಿಂಗನಮಕ್ಕಿ ಡ್ಯಾಂ ಒಟ್ಟಾರೆ 15 ಬಾರಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಡ್ಯಾಂನಿಂದ ಇಲ್ಲಿಯವರೆಗೆ 19 ಬಾರಿ ನದಿಗೆ ನೀರು ಹರಿ ಬಿಡಲಾಗಿದೆ.

1970 ರಲ್ಲಿ ಡ್ಯಾಂನಿಂದ ನದಿಗೆ ಅತೀ ಹೆಚ್ಚು 92.38 ಟಿಎಂಸಿ ನೀರನ್ನು ನದಿಗೆ ಹರಿಬಿಡಲಾಗಿದ್ದು, ಇದು ಡ್ಯಾಂನಿಂದ ಅತೀ ಹೆಚ್ಚು ನೀರು ಹೊರಬಿಟ್ಟ ದಾಖಲೆಯಾಗಿದೆ. ಉಳಿದಂತೆ 2007 ರಲ್ಲಿ ಒಂದೇ ವರ್ಷದಲ್ಲಿ 5 ಬಾರಿ ಡ್ಯಾಮ್‍ನ ಗೇಟ್ ತೆರೆದು ನೀರು ಹೊರ ಬಿಟ್ಟಿದ್ದು, ಮತ್ತೊಂದು ದಾಖಲೆಯಾಗಿದೆ.

ವೈಭವ: ಲಿಂಗನಮಕ್ಕಿ ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ತೆರೆದು ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಜೋಗ್ ಜಲಪಾತ ತನ್ನ ಹಳೇಯ ವೈಭವಕ್ಕೆ ಮರಳಿದೆ. ಭೋರ್ಗರೆಯಲಾರಂಭಿಸಿದ್ದು, ಜಲಧಾರೆಯಿಂದ ಧುಮ್ಮಿಕ್ಕಲಾರಂಭಿಸಿದೆ.

ಸುಮಾರು 830 ಅಡಿ ಎತ್ತರದಿಂದ ಬೀಳುವ ನೀರಿನ ರಮಣೀಯ ದೃಶ್ಯ ಪ್ರವಾಸಿಗರನ್ನು ರೋಮಾಂಚನಗೊಳಿಸುತ್ತಿದೆ. ಡ್ಯಾಂನಿಂದ ನೀರು ಹೊರಬಿಟ್ಟಿರುವುದು ಹಾಗೂ ಜಲಪಾತದ ಜಲಧಾರೆಯ ಕಳೆ ವೀಕ್ಷಿಸಲು ಸಾವಿರಾರು ಜನರು ಜೋಗಕ್ಕೆ ದೌಡಾಯಿಸುತ್ತಿದ್ದಾರೆ.

ಮಲೆನಾಡಿನಲ್ಲಿ ಮಳೆ ಚುರುಕು: ಹೊಸನಗರದಲ್ಲಿ ಧಾರಾಕಾರ ಮಳೆ

ಮಲೆನಾಡಿನಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಹೊಸನಗರ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ನದಿ, ಹಳ್ಳಕೊಳ್ಳಗಳು ಮತ್ತೆ ಉಕ್ಕಿ ಹರಿಯಲಾರಂಭಿಸಿವೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಬಾಳೆಕೊಪ್ಪ ಗ್ರಾಮದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದರು.

ಹೆಚ್ಚಿದ ಒಳಹರಿವು: ತುಂಗಾ ಹಾಗೂ ಭದ್ರಾ ಜಲಾಶಯಗಳು ಗರಿಷ್ಠ ಮಟ್ಟ ತಲುಪಿದ್ದು, ನೀರು ಹೊರಬಿಡಲಾಗುತ್ತಿದೆ. ಪ್ರಸ್ತುತ ಭದ್ರಾ ಡ್ಯಾಂನ ಒಳಹರಿವು 7581 ಕ್ಯೂಸೆಕ್ ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 19,170 ಕ್ಯೂಸೆಕ್ ಇದ್ದು, 17,368 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಶಿವಮೊಗ್ಗ 10 ಮಿ.ಮೀ., ಭದ್ರಾವತಿ 10.20 ಮಿ.ಮೀ.,

ತೀರ್ಥಹಳ್ಳಿ 41.20 ಮಿ.ಮೀ., ಸಾಗರ 25.06 ಮಿ.ಮೀ., ಶಿಕಾರಿಪುರ 8.20 ಮಿ.ಮೀ., ಸೊರಬ 25.10 ಮಿ.ಮೀ. ಹಾಗೂ ಹೊಸನಗರದಲ್ಲಿ 132.60 ಮಿ.ಮೀ. ವರ್ಷಧಾರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News