ಬ್ರೆಕ್ಸಿಟ್ ಕಾರ್ಯತಂತ್ರಕ್ಕೆ ಸೋಲು: ಆರೇ ವಾರಗಳಲ್ಲಿ ಬ್ರಿಟನ್ ಪ್ರಧಾನಿಗೆ ಮುಖಭಂಗ

Update: 2019-09-04 06:26 GMT

ಲಂಡನ್: ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಸಂಬಂಧ ಪ್ರಧಾನಿ ಬೋರಿಸ್ ಜಾನ್ಸನ್ ಮಂಡಿಸಿದ್ದ ಬ್ರೆಕ್ಸಿಸ್ಟ್ ಪ್ರಸ್ತಾವಕ್ಕೆ ಸಂಸತ್ತಿನಲ್ಲಿ ಹೀನಾಯ ಸೋಲು ಉಂಟಾಗಿದ್ದು, ಪರಿಣಾಮವಾಗಿ ದೇಶದಲ್ಲಿ ಹೊಸ ಚುನಾವಣೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.

ಅಧಿಕಾರ ವಹಿಸಿಕೊಂಡ ಕೇವಲ ಆರು ವಾರಗಳಲ್ಲೇ ಕನ್ಸರ್ವೇಟಿವ್ ಪಕ್ಷದ ಮುಖಂಡ ಸ್ವ ಪಕ್ಷೀಯರಿಂದಲೇ ಭಾರಿ ಭಿನ್ನಮತ ಎದುರಿಸಬೇಕಾ ಯಿತು. ಅ. 31ರಂದು ಬ್ರಿಟನ್, ಯೂರೋಪಿಯನ್ ಒಕ್ಕೂಟದಿಂದ ಹೊರಬರಲು ಅನುವು ಮಾಡಿಕೊಡುವಂತೆ ಪ್ರಧಾನಿ ಮಂಡಿಸಿದ ಪ್ರಸ್ತಾವನೆಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಬಹುಮತ ಸಿಗಲಿಲ್ಲ. ಇದರಿಂದ ಪ್ರಧಾನಿ, ದೇಶದಲ್ಲಿ ಮಿಂಚಿನ ಚುನಾವಣೆಯ ಸುಳಿವು ನೀಡಿದ್ದಾರೆ.

ಒಕ್ಕೂಟದಿಂದ ನಿರ್ಗಮಿಸುವುದನ್ನು ತಡೆಯುವ ಸಂಬಂಧ ಹಾಗೂ ಕನಿಷ್ಠ ಮೂರು ತಿಂಗಳ ಕಾಲ ಇದನ್ನು ಮುಂದೂಡುವ ಸಂಬಂಧದ ಕರಡು ಮಸೂದೆಯ ಕರಡನ್ನು ವಿರೋಧ ಪಕ್ಷಗಳ ಸಂಸದರು ಸಿದ್ಧಪಡಿಸಿದ್ದು, ಇದಕ್ಕೆ ಕನ್ಸರ್ವೇಟಿವ್ ಪಕ್ಷದ 21 ಮಂದಿ ಕೂಡಾ ಕೈಜೋಡಿಸಿದ್ದಾರೆ.
ತಾವು ಮಂಡಿಸುವ ಪ್ರಸ್ತಾವನೆಯ ವಿರುದ್ಧ ಮತ ಚಲಾಯಿಸುವ ಸಂಸದರನ್ನು ಉಚ್ಚಾಟಿಸಲಾಗುವುದು ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದರು.

ನಿರ್ಣಯಕ್ಕೆ 328-301 ಮತಗಳಿಂದ ಸೋಲು ಉಂಟಾದ ಬಳಿಕ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಅವಧಿ ಪೂರ್ವವಾಗಿ ಸಾರ್ವತ್ರಿಕ ಚುನಾವಣೆ ನಡೆಸುವುದು ಬಿಟ್ಟರೆ ಬೇರೆ ಯಾವ ಮಾರ್ಗವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಯೂರೋಪಿಯನ್ ಒಕ್ಕೂಟದಿಂದ ಹೊರಬರುವುದು ವಿಳಂಬವಾದಷ್ಟೂ ಮತ್ತಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News