ಮೈಸೂರು: ಡಿಕೆಶಿ ಬಂಧನ ಖಂಡಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

Update: 2019-09-04 08:16 GMT

ಮೈಸೂರು: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಕುತಂತ್ರ ರಾಜಕಾರಣಕ್ಕೆ ಬಗ್ಗಲ್ಲ, ಜಗ್ಗಲ್ಲ, ಕುಗ್ಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಗರದ ಗಾಂಧಿವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಅವರು ಮಳೆಯ ನಡುವೆಯೇ ಬಿಜೆಪಿ ಮತ್ತು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಬಿಜೆಪಿಯವರು ದ್ವೇಶದ ರಾಜಕಾರಣ ಮಾಡುತಿದ್ದಾರೆ. ವಿರೋಧ ಪಕ್ಷದವರನ್ನು ಮುಗಿಸಬೇಕು ಎಂಬ ಉದ್ದೇಶದಿಂದ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕಳೆದ ನಾಲ್ಕು ದಿನಗಳಿಂದಲೂ ಈಡಿ ತನಿಖೆಗೆ ಸಹಕರಿಸುತಿದ್ದರೂ ಅವರನ್ನು ಕುಗ್ಗಿಸಲು ಬಂಧನ ಮಾಡಲಾಗಿದೆ. ಅವರ ಬಂಧನ ಕಾನೂನು ಬಾಹಿರ. ನಾನು ವಕೀಲನಾಗಿ ಕೆಲಸ ಮಾಡಿದ್ದವನು. ಸಮನ್ಸ್ ಅಥವಾ ವಾರೆಂಟ್ ಜಾರಿಗೆ ಸಹಕರಿಸದಿದ್ದರೆ ಮಾತ್ರ ಬಂಧಿಸಬೇಕಾಗುತ್ತದೆ. ಆದರೆ ಇವರನ್ನು ಉದ್ದೇಶ ಪೂರ್ವಕವಾಗಿ ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾರ್ಯಕರ್ತ ರಾಜ್ಯಾದ್ಯಂತ ಹೋರಾಟ ಕೈಗೊಂಡಿದ್ದಾರೆ. ನಾಳೆ ಎಲ್ಲಾ ತಾಲ್ಲೂಕು ಘಟಕಗಳಲ್ಲಿ ಹೋರಾಟ ನಡೆಯಲಿದ್ದು, ಎಲ್ಲರೂ ಕಾನೂನಾತ್ಮಕವಾಗಿ ಶಾಂತ ರೀತಿಯಿಂದ ಹೋರಾಟ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಎಚ್.ಪಿ.ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್, ಕೆಪಿಸಿಸಿ ಸದಸ್ಯರಾದ ಎನ್.ಭಾಸ್ಕರ್, ಅಕ್ಬರ್ ಅಲೀಂ, ಹೆಡತಲೆ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರಾಧ್ಯಕ್ಷ ಎನ್.ಮೂರ್ತಿ, ನಂಜನಗೂಡು ನಗರಸಭಾ ಸದಸ್ಯ ಎಸ್.ಪಿ.ಮಹೇಶ್, ಕಾಂಗ್ರೆಸ್ ಮುಖಂಡರಾದ ಮಂಜುಳಾ ಮಾನಸ, ಮೈಸೂರು ಬಸವಣ್ಣ, ಸುನೀಲ್ ಸ್ವಾಮಿ, ಕೆ.ಎಸ್.ಶಿವರಾಂ, ಶ್ರೀಧರ್, ಕೆ.ಮಾರುತಿ, ಶುವಮಾದು, ಮೋದಾಮಣಿ, ಸೋಮಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News