ಸಿಎಂ ಬಾಹ್ಯ ಹಸ್ತಕ್ಷೇಪ ನಿಲ್ಲಿಸಲಿ: ಕಮಲ್ ನಾಥ್ ವಿರುದ್ಧ ಜ್ಯೋತಿರಾದಿತ್ಯ ಸಿಂಧಿಯಾ ಅಸಮಾಧಾನ

Update: 2019-09-04 11:31 GMT

ಭೋಪಾಲ್, ಸೆ.4: ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಬಾಹ್ಯ ಹಸ್ತಕ್ಷೇಪಕ್ಕೆ ಅನುಮತಿಸುವ ಬದಲು ತಮ್ಮ ಸಚಿವರ ಮಾತುಗಳನ್ನು ಆಲಿಸಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಹೇಳುವ ಮೂಲಕ ತಮ್ಮ ಹಾಗೂ ಸಿಎಂ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮಧ್ಯ ಪ್ರದೇಶದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆವರು ಪರ್ಯಾಯ ಸರಕಾರ ನಡೆಸುತ್ತಿದ್ದಾರೆಂದು  ಆರೋಪಿಸಿದ ಸಚಿವ ಉಮಂಗ್ ಸಿಂಘರ್ ಅವರಿಗೆ ಬೆಂಬಲವಾಗಿ ಸಿಂಧಿಯಾ ನಿಂತಿದ್ದೇ ಅಲ್ಲದೆ ಈ ಮೂಲಕ ಸಿಎಂ ಕಮಲ್ ನಾಥ್ ಅವರತ್ತ ವಾಗ್ಬಾಣ ಬೀಸಿದ್ದಾರೆ.

“ಸರಕಾರವೊಂದು ಸ್ವಂತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕೇ ಹೊರತು ಬಾಹ್ಯ ಹಸ್ತಕ್ಷೇಪಕ್ಕೆ ಅನುವು ಮಾಡಿಕೊಡಬಾರದು. ಉಮಂಗ್ ಜಿ ಅವರು ಎತ್ತಿದ ವಿಚಾರಗಳಿಗೆ ಗಮನ ನೀಡಬೇಕು. ಮುಖ್ಯಮಂತ್ರಿ ಎರಡೂ ಕಡೆಗಳನ್ನು ಆಲಿಸಿ ನಂತರ ಒಂದು ಪರಿಹಾರ ಕ್ರಮ ಕೈಗೊಳ್ಳಬೇಕು'' ಎಂದು ಸಿಂಧಿಯಾ ಹೇಳಿದ್ದಾರೆ.

“ಹದಿನೈದು ವರ್ಷಗಳ ಬಳಿಕ ಬಹಳಷ್ಟು ಶ್ರಮ ವಹಿಸಿದ ನಂತರ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ಇದೀಗ ಕೇವಲ ಆರು ತಿಂಗಳು ಕಳೆದಿದೆಯಷ್ಟೇ” ಎಂದು ಅವರು ಹೇಳಿದರು.

“ಸರಕಾರದ ಮೇಲೆ ಎಲ್ಲರಿಗೂ ನಿರೀಕ್ಷೆಗಳಿವೆ. ಕೆಲವೊಂದು ಭಿನ್ನಾಭಿಪ್ರಾಯಗಳಿದ್ದರೂ ಜತೆಯಾಗಿ ಕುಳಿತು ಚರ್ಚಿಸಿ ಪರಿಹರಿಸಬೇಕು'' ಎಂದು ಸಿಂಧಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News