ಮುಜರಾಯಿ ಇಲಾಖೆಯಿಂದ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Update: 2019-09-04 11:36 GMT

ಶಿವಮೊಗ್ಗ, ಸೆ. 4: ಮುಜರಾಯಿ ದೇವಾಲಯಗಳ ದುರಸ್ತಿ, ಪುನರ್ ನಿರ್ಮಾಣ ಸೇರಿದಂತೆ ದೇವಾಲಯಗಳ ಕುಶಲ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಮುಜರಾಯಿ ಇಲಾಖೆಯಲ್ಲಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರ್ಚರಿಕರಿಗೆ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸುವ ಕುರಿತು ಸಹ ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಮುಜರಾಯಿ ದೇವಾಲಯಗಳನ್ನು ಆದಾಯದ ಆಧಾರದಲ್ಲಿ ಎ,ಬಿ ಮತ್ತು ಸಿ ಎಂದು ವಿಂಗಡಿಸಲಾಗಿದೆ. ಜಿಲ್ಲೆಯಲ್ಲಿರುವ ದೇವಾಲಯಗಳ ಆದಾಯವನ್ನು ಪರಿಶೀಲಿಸಿ ಅದರ ಗ್ರೇಡ್ ಬದಲಾಯಿಸುವ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಚಿವರು ಸೂಚನೆ ನೀಡಿದರು.

ಅಭಿವೃದ್ಧಿಗೆ ಕ್ರಮ: ಹಣಗೆರೆ ಕಟ್ಟೆಯಲ್ಲಿರುವ ಆರಾಧನಾ ಕೇಂದ್ರದ ಸ್ವಚ್ಛತೆಗೆ ವಿಶೇಷ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಸ್ವಚ್ಛತೆಗಾಗಿ ಜಿಲ್ಲಾಧಿಕಾರಿ ಅವರು ಸ್ಥಳೀಯ ಪಂಚಾಯತ್‍ಗೆ ಬಿಡುಗಡೆ ಮಾಡಿರುವ ಅನುದಾನದ ಬಳಕೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.

ಇಲ್ಲಿ ಹುಂಡಿಗೆ ಹಣ ಹಾಕದಂತೆ ಕೆಲವರು ತಡೆಯುತ್ತಿರುವ ಬಗ್ಗೆ ಶಾಸಕ ಅರಗ ಜ್ಞಾನೇಂದ್ರ ಅವರು ಮಾಹಿತಿ ನೀಡಿದ್ದು, ಈ ಕುರಿತು ಸಿಸಿ ಟಿವಿ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಹಣಗೆರೆ ಕಟ್ಟೆ ಆರಾಧನಾ ಕೇಂದ್ರದ ಸುತ್ತಲಿನ 5 ಎಕ್ರೆ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಅರಣ್ಯ ಇಲಾಖೆಗೆ ಪರ್ಯಾಯ ಸ್ಥಳವನ್ನು ನೀಡಬಹುದಾಗಿದೆ. ಇಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು. ಇಲ್ಲಿರುವ ಭೂತನಾಥ ಕೇಂದ್ರದಲ್ಲಿ ಅರ್ಚಕರೊಬ್ಬರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

ಶಾಸಕರಾದ ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ, ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News