ಡಿ.ಕೆ.ಶಿವಕುಮಾರ್ ಬಂಧನ: ರಾಜ್ಯದೆಲ್ಲೆಡೆ ಭುಗಿಲೆದ್ದ ಆಕ್ರೋಶ

Update: 2019-09-04 17:33 GMT

ಬೆಂಗಳೂರು, ಸೆ.4: ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ತಡರಾತ್ರಿ ಜಾರಿ ನಿರ್ದೇಶನಾಲಯ(ಈಡಿ) ಬಂಧಿಸಿದ ಕ್ರಮ ಖಂಡಿಸಿ, ರಾಜ್ಯದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಂಧನದ ಕ್ರಮ ಖಂಡಿಸಿ ಬೆಂಗಳೂರು, ಕಲಬುರಗಿ, ರಾಮನಗರ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಮಂಗಳೂರು, ದಾವಣಗೆರೆ ಸೇರಿ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಮೇಲೆ ಕಲ್ಲು ಎಸೆದು ಜಖಂಗೊಳಿಸಿರುವುದಲ್ಲದೆ, ಕೆಲ ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮತ್ತು ಡಿ.ಕೆ.ಶಿವಕುಮಾರ್ ಬೆಂಬಲಿಗರು, ವಾಹನಗಳ ಚಕ್ರಗಳಿಗೆ ಬೆಂಕಿ ಹಚ್ಚಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.

ಸಂಚಾರ ಸ್ಥಗಿತ: ಬಂಧನ ವಿರೋಧಿಸಿ ಪ್ರತಿಭಟನೆ ನಡೆದ ಹಿನ್ನೆಲೆ ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಹೋಗುವ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಬೆಳಗಿನ ಜಾವ ಸುಮಾರು 6 ಗಂಟೆಯಿಂದಲೂ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್‌ಗಳಿಗೆ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.

16 ಬಸ್‌ಗಳಿಗೆ ಹಾನಿ: ಕನಕಪುರ ಮತ್ತು ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಬೆಂಕಿ ಹಚ್ಚಿದ ಪರಿಣಾಮ ಕೆಎಸ್ಸಾರ್ಟಿಸಿಯ ಎರಡು ಬಸ್‌ಗಳು ಸುಟ್ಟುಹೋಗಿವೆ. ಕಲ್ಲು ತೂರಾಟ ನಡೆಸಿದ್ದರಿಂದ ಒಟ್ಟು 16 ಬಸ್‌ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಕನಕಪುರ ಪಟ್ಟಣದಲ್ಲಿ ಬಸ್‌ವೊಂದು ಸಂಪೂರ್ಣ ಸುಟ್ಟು ಹೋಗಿದ್ದರೆ, ಮತ್ತೊಂದು ಬಸ್ ಭಾಗಶಃ ಸುಟ್ಟು ಹೋಗಿದೆ. ಒಂದು ವೋಲ್ವೊ ಸೇರಿದಂತೆ 16 ಬಸ್‌ಗಳು ಹಾನಿಗೀಡಾಗಿದ್ದು, ಕಲ್ಲು ತೂರಾಟದಿಂದಾಗಿ ಬಸ್‌ಗಳ ಗಾಜು ಒಡೆದುಹೋಗಿವೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಫ್‌ಐಆರ್ ದಾಖಲು: ರಾಮನಗರದಲ್ಲಿ ತಡರಾತ್ರಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಆರೋಪದಡಿ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲು ಕೆಪಿಸಿಸಿ ಕರೆ ನೀಡಿದ ಹಿನ್ನೆಲೆ, ಬಹುತೇಕ ಕಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ, ಮೆರವಣಿಗೆ ನಡೆಸುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ, ಜೆಡಿಎಸ್ ಕಾರ್ಯಕರ್ತರು ಸಹ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೇಂದ್ರ ಕಚೇರಿಗಳಿಗೆ ಪೊಲೀಸ್ ಭದ್ರತೆ

ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿರುವ ಕೇಂದ್ರದ ಸ್ವಾಯತ್ತ ಸಂಸ್ಥೆಗಳಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ನಗರದ ಡಾಲರ್ಸ್ ಕಾಲನಿಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸ, ಗಂಗಾನಗರದಲ್ಲಿರುವ ಸಿಬಿಐ ಕಚೇರಿ, ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಮಹಡಿಯಲ್ಲಿರುವ ಈಡಿ ಕಚೇರಿ, ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದ ಬಳಿಯ ಐಟಿ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಂಕಿ

ಶಿವಕುಮಾರ್ ಬಂಧನ ವಿರೋಧಿಸಿ ಚಳ್ಳಕೆರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪೆಟ್ರೋಲ್ ಸುರಿದು ಟೈರಿಗೆ ಬೆಂಕಿ ಹಚ್ಚುವಾಗ ಈ ಅವಘಡ ಸಂಭವಿಸಿದೆ. ಎಂಟು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಗಾಯಾಳುಗಳಿಗೆ ಚಳ್ಳಕೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಶಿಕ್ಷಕರ ದಿನಾಚರಣೆ ಮುಂದೂಡಿಕೆ ?

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನ ವಿರೋಧಿಸಿ ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚಿದ್ದು, ನಾಳೆ(ಸೆ.5) ನಡೆಯಬೇಕಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ರೇಷ್ಮೆ ಮಾರುಕಟ್ಟೆಗೆ ತಟ್ಟಿದ ಬಿಸಿ

ಕನಕಪುರ ರೇಷ್ಮೆಗೂಡು ಮಾರುಕಟ್ಟೆಗೂ ಬಂದ್ ಬಿಸಿ ತಟ್ಟಿದ್ದು, ವಹಿವಾಟು ಸ್ಥಗಿತಗೊಂಡಿದೆ. ಬುಧವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ಆರಂಭ ಆಗಬೇಕಿತ್ತು. ಆದರೆ, ತಡವಾಗಿದ್ದು, ಬೆಲೆಯೂ ಕುಸಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News