ಚಿಕ್ಕಮಗಳೂರು: ಬಸ್‍ಗಳ ನಡುವೆ ಮುಖಾಮುಖಿ ಢಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯು

Update: 2019-09-05 11:52 GMT

ಚಿಕ್ಕಮಗಳೂರು, ಸೆ.5: ಕೆಎಸ್ಸಾರ್ಟಿಸಿ ಬಸ್ ಹಾಗೂ ಖಾಸಗಿ ಸಂಸ್ಥೆಯೊಂದರ ಸಾರಿಗೆ ಬಸ್‍ಗಳು ಮುಖಾಮುಖಿ ಢಿಕ್ಕಿಯಾದ ಘಟನೆ ಗುರುವಾರ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ವರದಿಯಾಗಿದ್ದು, ಅಪಘಾತದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟು, 28 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಹಾದು ಹೋಗಿರುವ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‍ಗಳು ಢಿಕ್ಕಿಯಾಗಿದ್ದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್‍ಗೆ ಶಿವಮೊಗ್ಗದಿಂದ ತರೀಕೆರೆಯತ್ತ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಮೃತಪಟ್ಟ ಚಾಲಕ ಮದ್ದೂರು ನಿವಾಸಿ ಪುಟ್ಟಸ್ವಾಮಿ ಎಂದು ತಿಳಿದುಬಂದಿದೆ.

ಬಸ್‍ಗಳು ಢಿಕ್ಕಿಯಾದ ರಭಸಕ್ಕೆ ಎರಡೂ ಬಸ್‍ಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಈ ವೇಳೆ ಕೆಎಸ್ಸಾರ್ಟಿಸಿ ಬಸ್‍ನಲ್ಲಿದ್ದ ಚಾಲಕ ಗಂಭೀರವಾಗಿ ಗಾಯಗೊಂಡು ಬಸ್‍ನಲ್ಲಿದ್ದಾಗಲೇ ಮೃತಪಟ್ಟಿದ್ದಾರೆ. ಖಾಸಗಿ ಬಸ್‍ನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಸ್‍ನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದರಿಂದ ಚಾಲಕನನ್ನು ಸ್ಥಳೀಯರು ಹರಸಾಹಸಪಟ್ಟು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಘಟನೆಯಲ್ಲಿ ಎರಡೂ ಬಸ್‍ಗಳ ಒಟ್ಟು 28 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿವಮೊಗ್ಗ ಹಾಗೂ ತರೀಕೆರೆ, ಬೀರೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. 

ಘಟನೆಯಿಂದಾಗಿ ಶಿವಮೊಗ್ಗ ಬೆಂಗಳೂರು ಹೆದ್ದಾರಿಯಲ್ಲಿ ಸುಮಾರು 1 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸಪಟ್ಟು ಹೆದ್ದಾರಿಯ ಸಂಚಾರಿ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News