ಕೇಂದ್ರದ ಬಿಜೆಪಿ ಸರಕಾರದಿಂದ ಹಿಟ್ಲರ್ ಮಾದರಿ ಆಡಳಿತ: ಕಿಸಾನ್ ಕಾಂಗ್ರೆಸ್‍ ರಾಜ್ಯಾಧ್ಯಕ್ಷ ಸಚಿನ್ ಮೀಗಾ

Update: 2019-09-05 13:30 GMT

ಚಿಕ್ಕಮಗಳೂರು, ಸೆ.5: ಕೇಂದ್ರದ ಬಿಜೆಪಿ ಸರಕಾರ ಈಡಿ, ಐಟಿ, ಸಿಬಿಐಯಂತಹ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ತನ್ನ ಕಾರ್ಯ ಸಾಧನೆಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನ ಇದರ ಮುಂದುವರಿದ ಭಾಗವಾಗಿದೆ. ಈ ಹಿಂದೆ ಗುಜರಾತಿನ ಶಾಸಕರಿಗೆ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ರಕ್ಷಣೆ ನೀಡಿದ ಕಾರಣಕ್ಕೆ ಹಾಗೂ ಡಿಕೆಶಿ ಬಿಜೆಪಿಗೆ ಪಕ್ಷಾಂತರವಾಗದ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಬಿಜೆಪಿ ನಾಯಕರು ಡಿಕೆಶಿ ವಿರುದ್ಧ ದ್ವೇಷ ಸಾಧಿಸುವ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಹುನ್ನಾರ ನಡೆಸಿದ್ದಾರೆಂದು ಕಿಸಾನ್ ಖೇತ್ ಮಜ್ದೂರು ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರಕಾರ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಆರ್ಥಿಕ ಹಿಂಜರಿತದಿಂದಾಗಿ ದೇಶದ ಕೈಗಾರಿಕೋದ್ಯಮ ತೀವ್ರ ಸಂಕಷ್ಟದಲ್ಲಿದೆ. ಖಾಸಗಿ ಕ್ಷೇತ್ರದಲ್ಲಿದ್ದ ಲಕ್ಷಾಂತರ ಮಂದಿ ಉದ್ಯೋಗಿಗಳು ನಿರುದ್ಯೋಗಿಗಳಾಗಿ ಬದಲಾಗುತ್ತಿದ್ದು, ಜನರು ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ಧ್ವನಿ ಎತ್ತಬಾರದೆಂಬ ಕಾರಣಕ್ಕೆ ಕೇಂದ್ರದ ಮೋದಿ ಹಾಗೂ ಅಮಿತ್ ಶಾ ಜನರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎನ್ನುತ್ತಿದ್ದಾರೆ. ಮೋದಿ ಅವರಿಗೆ ನಿಜವಾಗಿಯೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕಾಳಜಿ ಇದ್ದಲ್ಲಿ ಮೊದಲು ಅವರು ತಮ್ಮದೇ ಪಕ್ಷದಲ್ಲಿರುವ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದ ಅವರು, ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕೇಂದ್ರದ ಬಿಜೆಪಿ ಸರಕಾರ ದೇಶಾದ್ಯಂತ ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿದೆ. ಈ ಮೂಲಕ ಅವರು ಹಿಟ್ಲರ್ ಮಾದರಿಯ ಆಡಳಿತವನ್ನು ನಿಧಾನವಾಗಿ ಜನರ ಮೇಲೆ ಹೇರುತ್ತಿದ್ದಾರೆಂದು ಸಚಿನ್ ಮೀಗಾ ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಅವರನ್ನು ಹಣಿಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಳೆದ ಎರಡು ವರ್ಷಗಳಿಂದ ಷಡ್ಯಂತ್ರ ರೂಪಿಸುತ್ತಿದ್ದು, ಬಿಜೆಪಿಯೇತರ ಪಕ್ಷಗಳ ಪ್ರಭಾವಿ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಹಳೆಯ ಪ್ರಕರಣಗಳನ್ನು ಮುಂದಿಟ್ಟುಕೊಂಡು ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಕೆಲಸವನ್ನು ಎಲ್ಲ ರಾಜ್ಯಗಳಲ್ಲೂ ಮಾಡುತ್ತಿದೆ. ಇದರಿಂದ ಹೆದರಿಕೊಂಡು ಕೆಲ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗೆ ಸೇರ್ಪಡೆಯಾದವರ ಎಲ್ಲ ಕೇಸುಗಳನ್ನು ಖುಲಾಸೆ ಮಾಡಲಾಗಿದ್ದು, ರಾಜ್ಯದಲ್ಲಿ ಡಿಕೆ.ಶಿವಕುಮಾರ್ ಅವರ ತಾಕತ್ತೇನೆಂಬುದನ್ನು ಈ ಹಿಂದೆ ಗುಜರಾತ್ ಶಾಸಕರು ರಾಜ್ಯಕ್ಕೆ ಬಂದಿದ್ದ ವೇಳೆ ಮೋದಿ ಹಾಗೂ ಅಮಿತ್ ಶಾ ಅವರಿಗೆ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರನ್ನು ಬಿಜೆಪಿ ಪಕ್ಷದತ್ತ ಸೆಳೆಯಲು ಮುಖಂಡರು ವ್ಯರ್ಥ ಕಸರತ್ತು ಮಾಡಿದ್ದು, ಇದಕ್ಕೆ ಡಿಕೆಶಿ ಸೊಪ್ಪು ಹಾಕದ ಪರಿಣಾಮ ಅವರ ಮೇಲೆ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ರಾಜಕೀಯ ದ್ವೇಷ ಸಾಧನೆಗೆ ಮುಂದಾಗಿದ್ದಾರೆ. ಇದಕ್ಕೆ ಗೋವಿಂದ ಕಾರಜೋಳ ಅವರ ಹೇಳಿಕೆ ಪುಷ್ಟಿ ನೀಡುತ್ತಿದೆ ಎಂದರು.

ಈಡಿ, ಸಿಬಿಐ, ಐಟಿಯಂತಹ ಸಂಸ್ಥೆಗಳು ಪ್ರಸಕ್ತ ಕೇಂದ್ರ ಸರಕಾರದ ಕೈಗೊಂಬೆಗಳಾಗಿವೆ. ಈ ಕಾರಣಕ್ಕೆ ಈ ಸಂಸ್ಥೆಗಳಿಗೆ ಬಿಜೆಪಿ ಮುಖಂಡರ ಭ್ರಷ್ಟಾಚಾರಗಳು ಕಾಣುತ್ತಿಲ್ಲ. ಯಡಿಯೂರಪ್ಪ, ಜನಾರ್ಧನ ರೆಡ್ಡಿಯಂತಹ ರಾಜಕಾರಣಿಗಳ ಹಗರಣಗಳು ಸದನದಲ್ಲೂ ಚರ್ಚೆಯಾಗಿವೆ. ಆದರೆ ತನಿಖಾ ಸಂಸ್ಥೆಗಳು ಬಿಜೆಪಿ ಮುಖಂಡರ ಹಗರಣಗಳ ಪ್ರಕರಣವೂ ದಾಖಲಿಸುತ್ತಿಲ್ಲ, ವಿಚಾರಣೆಯನ್ನೂ ಮಾಡುತ್ತಿಲ್ಲ ಎಂದು ಟೀಕಿಸಿದ ಅವರು, ಈ ಹಿಂದೆ ಡಿಕೆಶಿ ಅವರ ದಿಲ್ಲಿ ನಿವಾಸದಲ್ಲಿ ಪತ್ತೆಯಾದ ಎಂಟೂವರೆ ಕೋಟಿ ರೂ. ಹಣ ತನಗೆ ಸೇರಿದ್ದೆಂದು ಶರ್ಮಾ ಟ್ರಾವೆಲ್ಸ್ ಮಾಲಕ ಈಗಾಗಲೇ ಐಟಿ ಇಲಾಖೆಗೆ ತಿಳಿಸಿದ್ದು, ಈ ಸಂಬಂಧ ಅಗತ್ಯ ಮಾಹಿತಿ, ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಐಟಿ ಇಲಾಖೆ ತನಿಖೆ ಮಾಡಬೇಕಿತ್ತು. ಆದರೆ ಕೇಂದ್ರ ಸರಕಾರ ಈಡಿಗೆ ವರ್ಗಾಯಿಸಿ ಬಂಧಿಸಿರುವುದರ ಹಿಂದೆ ದ್ವೇಷ ರಾಜಕಾರಣವಲ್ಲದೇ ಮತ್ತೇನೂ ಇಲ್ಲ ಎಂದು ಇದೇ ವೇಳೆ ಸಚಿನ್ ಮೀಗಾ ತಿಳಿಸಿದರು.
ಡಿಕೆಶಿ ಅವರು ಕೇಂದ್ರದ ಕುತಂತ್ರಕ್ಕೆ ಬಲಿಯಾಗಿದ್ದಾರೆ. ನ್ಯಾಯಾಲಯ ಅವರ ಪ್ರಕರಣವನ್ನು ವಿಚಾರಣೆ ಮಾಡಲಿದ್ದು, ನ್ಯಾಯಾಲಯದಿಂದಲೇ ಜನರಿಗೆ ಸತ್ಯ ತಿಳಿಯಲಿದೆ. ಬಿಜೆಪಿ ಮುಖಂಡರ ಕರಾಳ ಮುಖ ಶೀಘ್ರ ಜನರ ಮುಂದೆ ಬಟಾಬಯಲಾಗಲಿದ್ದು, ಡಿ.ಕೆ.ಶಿವಕುಮಾರ್ ಅವರ ಪರವಾಗಿ ರಾಜ್ಯದ ಕಾಂಗ್ರೆಸ್ ಮುಖಂಡರು ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧರಾಗಿದ್ದಾರೆ ಎಂದರು.

ಕಿಸಾನ್ ಖೇತ್ ಮಜ್ದೂರು ಕಾಂಗ್ರೆಸ್‍ನ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಎಚ್.ಎಸ್.ಕೃಷ್ಣೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿ, ಬೆಳೆ ಹಾನಿ ಸಂಭವಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಇದುವರೆಗೂ ಸಂತ್ರಸ್ಥರಿಗೆ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿಲ್ಲ. ಸರಕಾರಗಳು ಕೂಡಲೇ ಅತಿವೃಷ್ಟಿ ಪರಿಹಾರಕ್ಕೆ ನೆರವು ಒದಗಿಸಲು ಸೂಕ್ತ ಅನುದಾನ ಬಿಡುಗಡೆ ಮಾಡಬೇಕು. ರಾಜ್ಯದ ರೈತರು, ಅತಿವೃಷ್ಟಿಯಿಂದ ಕಂಗಾಲಾಗಿದ್ದರೂ ಕೇಂದ್ರ ಸರಕಾರಕ್ಕೆ ರಾಜ್ಯಕ್ಕೆ ನಯಾ ಪೈಸೆ ಪರಿಹಾರ ಧನ ನೀಡಿಲ್ಲ. ಆದರೆ ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದೆ. ಈ ಮೂಲಕ ರಾಜ್ಯಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಬಿಜೆಪಿ ಅಧಿಕಾರಕ್ಕೇರಿದೆ. ಆದರೆ ಭಾವನಾತ್ಮಕ ವಿಚಾರಗಳ ಆಧಾರದ ಮೇಲೆ ಆಡಳಿತ ನಡೆಸಬಾರದು, ಜನರ ಬದುಕಿನ ಆಧಾರದ ಮೇಲೆ ಕೇಂದ್ರ ಸರಕಾರ ಆಡಳಿತ ನಡೆಸಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಿಸಾನ್ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಈಶ್ವರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಅಮೀನ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಯ್ ಶರೀಫ್, ಮುಖಂಡರಾದ ಅಕ್ಮಲ್, ಆನಂದ್ ರಾವ್, ಅಶೋಕ್, ಫೈರೋಝ್, ಪ್ರಕಾಶ್ ರೈ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಸರಕಾರ ಟ್ಯಾಕ್ಸ್ ಟೆರರಿಸಮ್‍ಗೆ ನಾಂದಿ ಹಾಡುತ್ತಿದೆ: 
ಕೇಂದ್ರ ಸರಕಾರದ ಆರ್ಥಿಕ ನೀತಿಗಳು ದೇಶಾದ್ಯಂತ ಉದ್ಯಮ ಕ್ಷೇತ್ರವನ್ನು ಅಧಃಪತನದತ್ತ ಕೊಂಡೊಯ್ಯುತ್ತಿದೆ. ಕೇಂದ್ರದ ತೆರಿಗೆ ಪದ್ಧತಿಯಿಂದಾಗಿ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಐಟಿ ಅಧಿಕಾರಿಗಳ ಕಿರುಕುಳದಿಂದಲೇ ರಾಜ್ಯದ ಕಾಫಿ ಉದ್ಯಮಿ ಜಿ.ವಿ.ಸಿದ್ದಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಅವರು ತಮ್ಮ ಪತ್ರವೊಂದರಲ್ಲಿ ಸೂಕ್ಷ್ಮವಾಗಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಟ್ಯಾಕ್ಸ್ ಟೆರರಿಸಮ್ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದ್ದು, ಸಿದ್ದಾರ್ಥ ಅವರದ್ದು ಆತ್ಮಹತ್ಯೆಯಲ್ಲ, ಕೇಂದ್ರ ಸರಕಾರ ಐಟಿ ಇಲಾಖೆ ಮೂಲಕ ಸಿದ್ದಾರ್ಥ ಅವರಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ. ಸಿದ್ದಾರ್ಥ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ಐಟಿ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕು.
-ಸಚಿನ್ ಮೀಗಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News