ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್ ಸೋಲುತ್ತದೆ: ಶಾಸಕ ಜಿ.ಟಿ.ದೇವೇಗೌಡ

Update: 2019-09-05 15:45 GMT

ಮೈಸೂರು,ಸೆ.5: ನಾನು ಸಚಿನಾಗಿದ್ದಾಗ ಕ್ಷಣಕ್ಷಣಕ್ಕೂ ಅವಮಾನ ಮತ್ತು ನೋವು ಅನುಭವಿಸುತ್ತಿದ್ದೆ. ಈಗ ಶಾಸಕನಾಗಿ ಕ್ಷೇತ್ರದ ಜನರ ಕೆಲಸ ಮಾಡಿಕೊಂಡು ಆರಾಮಾಗಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ನಗರದ ಕಲಾಮಂದಿರದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಚಿನಾಗಿದ್ದಾಗ ಕ್ಷಣಕ್ಷಣಕ್ಕೂ ಅವಮಾನ ಮತ್ತು ನೋವುನ್ನು ಅನುಭವಿಸುತ್ತಿದ್ದೆ. ಈಗ ಶಾಸಕನಾಗಿ ಆರಾಮವಾಗಿದ್ದೇನೆ. ಜೆಡಿಎಸ್ ಸಂಘಟನೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲದ ಕಾರಣ ತಲೆಯ ಮೇಲಿದ್ದ ದೊಡ್ಡ ಬಂಡೆ ಇಳಿದಂತಾಗಿದೆ. ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದು ನನ್ನ ಮಗನಿಗೆ ಬಿಟ್ಟುಕೊಡುತ್ತಿದ್ದೇನೆ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಯಾಗಿದ್ದಾಗ ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಇಷ್ಟವಿಲ್ಲದಿದ್ದರೂ ಬೇಡ ಎಂದು ಮುನಿಸಿಕೊಂಡಿದ್ದೆ. ಆಗ ಯಾರು ನನ್ನ ಬಳಿ ಬಂದು ಮಾತನಾಡಲಿಲ್ಲ, ನಾನೆ ದೂರಾಗಲಿ ಎಂದು ಕಾಯುತ್ತಿದ್ದರು. ಆದರೆ ಕೊನೆಗೆ ನಾನೇ ಸಮಾಧಾನ ಮಾಡಿಕೊಂಡು ಸಚಿವ ಸ್ಥಾನ ಒಪ್ಪಕೊಂಡೆ. ನಂತರ ಅಚ್ಚುಕಟ್ಟಾಗಿ ನಿಭಾಯಿಸಿದೆ. ನಾನು ಮಾತ್ರ ಸರಕಾರ ಉಳಿಸಲು ಕೊನೆ ಕ್ಷಣದವರೆಗೂ ಹೋರಾಟ ಮಾಡಿದೆ. ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ಉಳಿಸಲು ಶತಪ್ರಯತ್ನ ಮಾಡಿದ್ದೇನೆ. ಆದರೆ ನಾನು ಜೆಡಿಎಸ್‍ನಲ್ಲಿ ಇರುವುದು ಬಹಳಷ್ಟು ಮಂದಿಗೆ ಇಷ್ಟವಿಲ್ಲ ಎಂದು ಜೆಡಿಎಸ್ ಮೇಲಿನ ತಮ್ಮ ಅಸಮಧಾನವನ್ನು ಹೊರಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಜನ ಸೋಲಿಸಿ, ನನ್ನನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರು ಸಿಎಂ ಆಗಲು ಕಾರಣವಾದರು. ಆಗ ಎಲ್ಲಾ ಕಡೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗೆ ಇರುವ ಅಧಿಕಾರ ಜಿ.ಟಿ.ದೇವೇಗೌಡರಿಗೂ ಇದೆ ಎಂದು ಹೇಳಿದ್ದರು. ಆದರೆ ಸಿಎಂ ಆದ ಮೇಲೆ ನಾನು ಯಾವ ಖಾತೆ ಬೇಡ ಎಂದು ಹೇಳಿದ್ದೆನೊ ಅದೇ ಖಾತೆ ಕೊಟ್ಟರು. ನಾನು ಮುನಿಸಿಕೊಂಡರೂ ಸಮಾಧಾನ ಮಾಡಲು ಬರಲಿಲ್ಲ. ನಾನು ಖಾತೆ ಬಿಟ್ಟು ಹೋಗಲಿ ಎಂದು ಕಾಯುತ್ತಿದ್ದರು ಎಂದು ಹೇಳಿದರು.

ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್ ಸೋಲುತ್ತದೆ ಎಂದು ಭವಿಷ್ಯ ನುಡಿದ ಜಿ.ಟಿ.ದೇವೇಗೌಡ, ಹುಣಸೂರು ಉಪ ಚುಣಾವಣೆಯಲ್ಲಿ ಜೆಡಿಎಸ್ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ನನ್ನ ಮಗನನ್ನು ಅಲ್ಲಿಂದ ಸ್ಪರ್ಧಿಸುವಂತೆ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ನಾನು ನಿಲ್ಲಿಸುವುದಿಲ್ಲ ಎಂದು ಹೇಳಿದೆ. ನನ್ನ ಮಗ ಬೇಕಾದರೆ ಮುಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ನಿಲ್ಲುತ್ತಾನೆ. ಸದ್ಯಕ್ಕೆ ನಾವು ಯಾವ ಉಪಚುನಾವಣೆಯಲ್ಲೂ ಸ್ಪರ್ಧೆಮಾಡುವುದಿಲ್ಲ, ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯಲಿದ್ದೇನೆ ಎಂದು ಹೇಳಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News