ಬಿಜೆಪಿಯ ಸೇಡಿನ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ

Update: 2019-09-05 16:05 GMT

ಬೆಂಗಳೂರು, ಸೆ.5: ಪ್ರಜಾಪ್ರಭುತ್ವದ ಎಲ್ಲ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಸೇಡಿನ ರಾಜಕಾರಣ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೆಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ನೈಜ ಕಳಕಳಿಯಿದ್ದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಕ್ಷ ಭೇದವಿಲ್ಲದೆ, ಭ್ರಷ್ಟರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮ ಆಸ್ತಿ, ವ್ಯವಹಾರ ಹಾಗೂ ಅಕ್ರಮ ಹಣ ಹೊಂದಿರುವವರ ಮನೆಗಳಿಗೆ ದಾಳಿ ಮಾಡಬೇಕು. ಅದೂ ಕೂಡಾ ಕಾನೂನು ನೀತಿ ನಿಯಮಗಳ ಅನುಸಾರವೇ ನಡೆಯಬೇಕು. ಆದರೆ, ಬಿಜೆಪಿ ಸರಕಾರ ಕೇವಲ ತಮ್ಮ ಸ್ವಾರ್ಥಕ್ಕಾಗಿ ವಿರೋಧ ಪಕ್ಷದ ನಾಯಕರನ್ನು ಅಕ್ರಮವಾಗಿ ಬಂಧಿಸಲು ಹೊರಟಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಆರೋಪದಲ್ಲಿ ಹುದ್ದೆಯಲ್ಲಿರುವಾಗಲೇ ಜೈಲಿಗೆ ಹೋದವರು. ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆಂದರೆ ಅದು ರಾಜ್ಯಕ್ಕೆ ಮಾಡುವ ಅವಮಾನವಾಗಿದೆ. ಇತ್ತೀಚೆಗೆ ಬಿಜೆಪಿ ಪಕ್ಷದ ನಾಯಕರೊಬ್ಬರು ಬೇರೆ ಪಕ್ಷದ ಶಾಸಕರಿಗೆ 5 ಕೋಟಿ ರೂ.ನ್ನು ಆಮಿಷವಾಗಿ ತೋರಿಸಿದ್ದು ಮತ್ತು ಕರ್ನಾಟಕದ ಅತೃಪ್ತ ಶಾಸಕರಿಗೆ ಹಣವನ್ನು ನೀಡಿ ರೆಸಾರ್ಟಿನಲ್ಲಿ ಹಿಡಿದಿಟ್ಟಿರುವುದರ ಕುರಿತು ಸ್ವಯತ್ತ ಸಂಸ್ಥೆಗಳು ತನಿಖೆಗೆ ಮುಂದಾಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬಳ್ಳಾರಿ ಗಣಿ ಮಾಫಿಯಾಗಳು, ಬೆಂಗಳೂರಿನ ಕೆರೆ ಹಾಗೂ ಸಾರ್ವಜನಿಕ ಜಾಗಗಳನ್ನು ಕಬಳಿಸುತ್ತಿರುವವರ ಮನೆಗಳಿಗೆ ಸರಕಾರ ಯಾಕೆ ದಾಳಿ ಮಾಡುತ್ತಿಲ್ಲ. ಸಂಜೀವ್ ಭಟ್‌ರಂತಹ ದಕ್ಷ, ನಿಷ್ಠಾವಂತ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಸುಳ್ಳು ಕೇಸುಗಳ ಮೂಲಕ ಜೈಲಿಗೆ ತಳ್ಳುವ ಕೇಂದ್ರದ ಬಿಜೆಪಿ ಹಾಗೂ ರಾಜ್ಯ ಸರಕಾರಗಳಿಂದ ಯಾವುದೇ ಒಳ್ಳೆಯ ಕೆಲಸ ನಿರೀಕ್ಷಿಸುವಂತಿಲ್ಲ. ಈ ಬಗ್ಗೆ ಜನ ಸಮುದಾಯ ಬಿಜೆಪಿ ನಾಯಕರನ್ನು ಪ್ರಶ್ನಿಸುವಂತಾಗಬೇಕೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News