ಮಧ್ಯಂತರ ಚುನಾವಣೆ ಎದುರಾಗದು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

Update: 2019-09-05 16:18 GMT

ಬಾಗಲಕೋಟೆ, ಸೆ. 5: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಸುಭದ್ರವಾಗಿದ್ದು, ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯನವರು ಯಾವುದೇ ಸಮಯದಲ್ಲಾದರೂ ಮಧ್ಯಂತರ ಚುನಾವಣೆ ಎದುರಾಗಬಹುದೆಂದು ಹೇಳಿರುವುದು ದಿಕ್ಕು ತಪ್ಪಿಸುವ ಯತ್ನವಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ತನ್ನ ಪೂರ್ಣಾವಧಿಯನ್ನು ಮುಗಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ನಿಂತ ನೀರಲ್ಲ. ಇದು ಹರಿಯುವ ನೀರು. ಯಾರಾದರೂ ಬಿಜೆಪಿ ತತ್ವ-ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುವುದಾದರೆ ಅವರನ್ನು ಸ್ವಾಗತಿಸುತ್ತೇವೆ ಎಂದರು.

ಪ್ರಧಾನಿ ಮೋದಿಯವರು ರಾಜ್ಯಕ್ಕೆ ಚಂದ್ರಯಾನ ಮಿಷನ್-2 ವೀಕ್ಷಿಸಲು ಬರಲಿದ್ದಾರೋ ಅಥವಾ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಬರಲಿದ್ದಾರೋ ಎಂಬ ಬಗ್ಗೆ ಗೋವಿಂದ ಕಾರಜೋಳ ಅವರು ಇದೇ ವೇಳೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಪತ್ರಕರ್ತರಿಗೆ ಕೈ ಮುಗಿದ ಕಾರಜೋಳ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕಾರಜೋಳ ಅವರು, ಕೈಜೋಡಿಸಿ ನಮಸ್ಕಾರ ಮಾಡಿ ಮುನ್ನಡೆದರು. ಡಿ.ಕೆ.ಶಿವಕುಮಾರ್ ಬಂಧನಕ್ಕೆ ಸಂಬಂಧಿಸಿದಂತೆ ನಾನು ಹೇಳಿಕೆ ನೀಡಿದ್ದು ಒಂದು ಮಾಧ್ಯಮಗಳಲ್ಲಿ ಬಿಂಬಿಸುವುದು ಮತ್ತೊಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕೆಲ ಶಬ್ದಗಳನ್ನು ಬಳಸುತ್ತಿರುತ್ತೇನೆ. ಆದರೆ, ಸುದ್ದಿವಾಹಿನಿಗಳಲ್ಲಿ ‘ಕನಕಪುರ ಬಂಡೆಗೆ ಕಾರಜೋಳ ಡಿಚ್ಚಿ’ ಅಂದರೆ ನನ್ನ ಗತಿ ಏನು? ಇಂತಹ ವಿವಾದಗಳಿಗೆ ಆಸ್ಪದ ನೀಡುವಂತಹ ಯಾವುದೇ ಪ್ರಶ್ನೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News