ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ ಇಲ್ಲ: ನಿತಿನ್ ಗಡ್ಕರಿ

Update: 2019-09-05 16:24 GMT

 ಹೊಸದಿಲ್ಲಿ, ಸೆ. 5: ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ನಿಷೇಧಿಸುವ ಉದ್ದೇಶ ಇಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

‘‘ಈ ಬಗ್ಗೆ ಚರ್ಚೆಗಳು ನಡೆದಿವೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ನಿಷೇಧಿಸಬೇಕು ಎಂಬ ಸಲಹೆಗಳನ್ನು ಸಚಿವಾಲಯ ಸ್ವೀಕರಿಸಿದೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ನಿಷೇಧಿಸುವ ಯಾವುದೇ ಉದ್ದೇಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲು ಸರಕಾರ ಬಯಸುತ್ತದೆ. ಇಂತಹ ಯಾವುದೇ ತೀರ್ಮಾನವನ್ನು ನಾವು ತೆಗೆದುಕೊಳ್ಳುವುದಿಲ್ಲ’’ ಎಂದು ಗಡ್ಕರಿ ತಿಳಿಸಿದ್ದಾರೆ.

 ‘ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್‌’ (ಎಸ್‌ಐಎಎಂ)ನ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಭಾರತೀಯ ಅಟೋಮೊಬೈಲ್ ಇಂಡಸ್ಟ್ರಿ ಅತ್ಯಧಿಕ ರಫ್ತಿಗೆ ಸಾಕ್ಷಿಯಾಗಿದೆ. ಈ ಇಂಡಸ್ಟ್ರಿ ಸಾಕಷ್ಟು ಉದ್ಯೋಗವಕಾಶ ಕೂಡ ನೀಡಿದೆ ಎಂದು ಅವರು ತಿಳಿಸಿದರು. ಮಾಲಿನ್ಯ ಕಡಿಮೆ ಮಾಡುವುದು ರಾಷ್ಟ್ರೀಯ ಹಿತಾಸಕ್ತಿ ಎಂದು ಉಲ್ಲೇಖಿಸಿದ ಅವರು, ಮಾಲಿನ್ಯದ ಸಮಸ್ಯೆಗೆ ವಾಹನಗಳನ್ನು ಮಾತ್ರ ಹೊಣೆಯಾಗಿ ಮಾಡುವುದು ಸರಿಯಲ್ಲ ಎಂದರು.

ದಿಲ್ಲಿಯ ಮಾಲಿನ್ಯ ಅಲ್ಲಿನ ಪ್ರತಿಯೊಬ್ಬರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಜಗತ್ತು ಕೂಡ ಮಾಲಿನ್ಯದ ದುಷ್ಪರಿಣಾಮ ಎದುರಿಸುತ್ತಿದೆ. ಮಾಲಿನ್ಯದ ಮೂಲ ಗುರುತಿಸಲು ದಿಲ್ಲಿ 5,000 ಕೋಟಿ ರೂಪಾಯಿಯ ಯೋಜನೆ ರೂಪಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News