ಕೊಡಗಿನಲ್ಲಿ ಮುಂದುವರಿದ ಧಾರಾಕಾರ ಮಳೆ: ಉಕ್ಕಿ ಹರಿಯುತ್ತಿರುವ ನದಿಗಳು

Update: 2019-09-05 17:05 GMT

ಮಡಿಕೇರಿ, ಸೆ.5: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಿರು ತೊರೆ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆಗಳಲ್ಲಿ ಗುಡ್ಡ ಕುಸಿತದ ಘಟನೆಗಳು ನಡೆದಿವೆ.

ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಸರಾಸರಿ 10 ಇಂಚು ಮಳೆಯಾಗಿದ್ದು, ಭಾಗಮಂಡಲ ಪ್ರವಾಹದ ನೀರಿನಿಂದ ಆವರಿಸಲ್ಪಟ್ಟು ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ದಕ್ಷಿಣ ಕೊಡಗು ವೀರಾಜಪೇಟೆ ತಾಲೂಕಿನ ಬಾಳೆಲೆ ನಿಟ್ಟೂರು ವಿಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಲಕ್ಷ್ಮಣತೀರ್ಥ ನದಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನದಿ ಪಾತ್ರದ ಗದ್ದೆ ಬಯಲುಗಳಲ್ಲಿ ಪ್ರವಾಹದ ನೀರು ಆವರಿಸಿ ಕೃಷಿಕ ಸಮೂಹವನ್ನು ಮತ್ತೆ ಆತಂಕಕ್ಕೆ ದೂಡಿದೆ.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದ್ದು, ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 6 ಇಂಚಿನಷ್ಟು ಮಳೆಯಾಗಿದ್ದರೆ, ಸೋಮವಾರಪೇಟೆಯಲ್ಲಿ 2.5 ಇಂಚು ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗಿನ ವರೆಗೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಗುಡ್ಡದ ಮೇಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಹಗಲಿನ ವೇಳೆಯಲ್ಲಿ ಮಳೆ ಕೊಂಚ ಬಿಡುವು ನೀಡಿತ್ತಾದರೂ ಸಂಜೆ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಿದೆ. ಮಡಿಕೇರಿ ನಗರದಲ್ಲಿ ಮಳೆ ಸಹಿತ ಚಳಿಯ ವಾತಾವರಣ ಮುಂದುವರೆದಿದೆ.

15 ಸಾವಿರ ಕ್ಯೂಸೆಕ್ ನೀರು ನದಿಗೆ
ಹಾರಂಗಿ ನದಿ ಪಾತ್ರದ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಣೆಕಟ್ಟಿನ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ, ಗುರುವಾರ ಬೆಳಗ್ಗೆ ಅಣೆಕಟ್ಟೆಯಿಂದ ನದಿಗೆ 15 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.

ಹಾರಂಗಿ ಅಣೆಕಟ್ಟು ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಮಂಜುನಾಥ್, ನದಿ ಪಾತ್ರದ ಪ್ರದೇಶಗಳಲ್ಲಿನ ಭಾರೀ ಮಳೆಯಿಂದ ಅಣೆಕಟ್ಟಿನ ಒಳಹರಿವಿನ ಬಗ್ಗೆ ತೀವ್ರ ನಿಗಾ ಇರಿಸಲಾಗಿದೆ. ಒಳಹರಿವಿನ ಪ್ರಮಾಣಕ್ಕೆ ತಕ್ಕಂತೆ ನದಿಗೆ ನೀರನ್ನು ಹರಿಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕುಶಾಲನಗರದಲ್ಲಿ ಮತ್ತೆ ಆತಂಕ

ಭಾರೀ ಮಳೆಯಿಂದ ಕಾವೇರಿ ನದಿ ನೀರಿನ ಮಟ್ಟ ಅಪಾಯಕಾರಿ ಮಟ್ಟವನ್ನು ಮುಟ್ಟುವ ಸಾಧ್ಯತೆಗಳು ಗೋಚರಿಸುತ್ತಿದೆ. ಇದರಿಂದ ಕುಶಾಲನಗರದ ತಗ್ಗು ಪ್ರದೇಶಗಳಲ್ಲಿರುವ ಬಡಾವಣೆಗಳ ನಿವಾಸಿಗಳು ಮಗದೊಮ್ಮೆ ಆತಂಕಕ್ಕೆ ಸಿಲುಕಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಗ್ಗು ಪ್ರದೇಶದ ನಿವಾಸಿಗಳಿಗೆ ಆಡಳಿತ ವ್ಯವಸ್ಥೆ ಈಗಾಗಲೆ ಸೂಚನೆಯನ್ನು ನೀಡಿದೆ.

ಅಬ್ಬಿ ಜಲಪಾತದ ಬಳಿ ಗುಡ್ಡ ಕುಸಿತ
ಕೊಡಗಿಗೆ ಆಗಮಿಸುವ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮಡಿಕೇರಿಯ ಅಬ್ಬಿ ಜಲಪಾತದ ಆಕರ್ಷಣೆ ಮಹಾಮಳೆಯಿಂದ ಹೆಚ್ಚಾಗಿದೆ. ಆದರೆ ನೀರಿನ ರಭಸಕ್ಕೆ ಜಲಪಾತದ ಬಳಿಯ ಬೃಹತ್ ಗುಡ್ಡ ಕುಸಿಯಲು ಆರಂಭಿಸಿದ್ದು, ಆತಂಕ ಮೂಡಿಸಿದೆ.

ಕೊಡಗು ಜಿಲ್ಲೆಯ ಮಳೆ ವಿವರ
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 99.16 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2383.04 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3782.88 ಮಿ.ಮೀ ಮಳೆಯಾಗಿತ್ತು.                              

ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 159.55 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3195.12 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 5474.43 ಮಿ.ಮೀ. ಮಳೆಯಾಗಿತ್ತು.    

ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 77.22 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2387.02 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2861.98 ಮಿ.ಮೀ. ಮಳೆಯಾಗಿತ್ತು.   

ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.70 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1566.97 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 3012.24 ಮಿ.ಮೀ. ಮಳೆಯಾಗಿತ್ತು.   

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.19 ಅಡಿಗಳು, ಕಳೆದ ವರ್ಷ ಇದೇ ದಿನ 2854.95 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 22.60 ಮಿ.ಮೀ., ಇಂದಿನ ನೀರಿನ ಒಳಹರಿವು 8730 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2200 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 6522 ಕ್ಯುಸೆಕ್. ನಾಲೆಗೆ 1000 ಕ್ಯುಸೆಕ್. ಕಳೆದ ವರ್ಷ ಇದೇ ಅವಧಿಯಲ್ಲಿ ನದಿಗೆ 500, ನಾಲೆಗೆ 1600 ಕ್ಯುಸೆಕ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News