ಡಿಕೆಶಿ ತಾಯಿಯ ಕಣ್ಣೀರು ಬಿಜೆಪಿಗೆ ಪಾಠ ಕಲಿಸುತ್ತದೆ: ಎಚ್.ಡಿ.ಕುಮಾರಸ್ವಾಮಿ

Update: 2019-09-06 13:33 GMT

ಬೆಂಗಳೂರು, ಸೆ.6: ಕೇಂದ್ರ ಬಿಜೆಪಿ ಸರಕಾರ ಪಿತೂರಿ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದೆ. ಈ ಸಂದರ್ಭದಲ್ಲಿ ಅವರ ತಾಯಿಯ ನೋವು ಹಾಗೂ ಕಣ್ಣೀರ ಶಾಪ ಬಿಜೆಪಿಯನ್ನು ಸುಮ್ಮನೆ ಬಿಡುವುದಿಲ್ಲ. ತಕ್ಕ ಪಾಠ ಕಲಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಕನಕಪುರದ ಸಾತನೂರಿನ ಕೋಡಿಹಳ್ಳಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ಮಾಡಿದ ಕುಮಾರಸ್ವಾಮಿ, ಶಿವಕುಮಾರ್ ಅವರ ತಾಯಿ ಗೌರಮ್ಮ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಯಾವುದಕ್ಕೂ ಹೆದರಬೇಡಿ, ಈ ಎಲ್ಲ ಸಂಕಷ್ಟಗಳನ್ನು ಎದುರಿಸಿ ಶಿವಕುಮಾರ್ ಹೊರ ಬರುತ್ತಾರೆ. ಬಿಜೆಪಿಯ ಈ ಕುತಂತ್ರ ಕೇವಲ ಎರಡು ದಿನ. ನಾವೆಲ್ಲರು ನಿಮ್ಮ ಜತೆ ಇದ್ದೇವೆ. ಹೆಚ್ಚು ಚಿಂತಿಸಬೇಡಿ. ಆರೋಗ್ಯದ ಕಡೆ ಗಮನಹರಿಸಿ ಎಂದು ಕುಮಾರಸ್ವಾಮಿ ಸಮಾಧಾನ ಮಾಡಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಕೊಂಡ ಪರಿಣಾಮ ಕೇಂದ್ರ ಸರಕಾರ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಂಡು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ನಾಲ್ಕು ದಿನಗಳ ಕಾಲ ವಿಚಾರಣೆಗೆ ಹಾಜರಾಗಿ ಅವರ ಪ್ರಶ್ನೆಗೆ ಉತ್ತರಿಸಿದರೂ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ಅವಕಾಶ ಇಲ್ಲ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗಿದೆ. ಆದರೂ ಅವರನ್ನು ಬಂಧಿಸಿರುವುದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಸಾಕ್ಷಿ ಎಂದು ಅವರು ಕಿಡಿಗಾರಿದರು.

ಈ ತಾಯಿಯ ನೋವು ಹಾಗೂ ಕಣ್ಣೀರ ಶಾಪ ಬಿಜೆಪಿ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲಿದೆ. ಅವರನ್ನು ಸರ್ವನಾಶ ಮಾಡಲಿದೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಕಾಲಚಕ್ರ ಬದಲಾಗಲಿದೆ. ನಾಳೆ ಇದೇ ಪರಿಸ್ಥಿತಿ ಬಿಜೆಪಿ ನಾಯಕರಿಗೆ ಬಂದರೆ ಆಶ್ಚರ್ಯ ಇಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ನಮ್ಮ ಶಾಸಕರನ್ನು ಹೈಜಾಕ್ ಮಾಡಲು 30 ಕೋಟಿ ರೂ.ಹಣ ನೀಡಿದ್ದಾರೆ. ಅವರ ಮೇಲೆ ಯಾವ ದಾಳಿಯೂ ಆಗಿಲ್ಲ. ಕೆಫೆ ಕಾಫಿ ಡೇ ಮಾಲಕ ಸಿದ್ಧಾರ್ಥ ಕೂಡ ಈ ಐಟಿ ಇಲಾಖೆಯಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ರವನ್ನು ಮುಚ್ಚಿ ಹಾಕಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಇದು ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ. ಎಲ್ಲ ಸಮಾಜದವರನ್ನು ಗೌರವಿಸಬೇಕು. ಅವರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆ ಮಾಡುವ ಅವಶ್ಯಕತೆ ಇರಲಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಅಂತಾರೆ, ಆದರೆ, ಅವರು ಮಾಡುತ್ತಿರೋದು ಕೇವಲ ದ್ವೇಷದ ರಾಜಕಾರಣ ಎಂದು ಕುಮಾರಸ್ವಾಮಿ ದೂರಿದರು.

ರಾಜ್ಯದಲ್ಲಿ ಪ್ರವಾಹ ಬಂದಿದೆ. ಅದರ ಬಗ್ಗೆ ಬಿಜೆಪಿ ಸರಕಾರಕ್ಕೆ ಯಾವುದೇ ಚಿಂತೆಯೇ ಇಲ್ಲ. ಜನಪರ ಕೆಲಸ ಮಾಡಲು ಮರೆತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News