ಮಗಳ ಸಾವನ್ನು ಮುಚ್ಚಿಟ್ಟು ನಿರ್ವಾಹಕನನ್ನು ಕೆಲಸಕ್ಕೆ ಕಳುಹಿಸಿದ ಅಧಿಕಾರಿಗಳು: ಆರೋಪ

Update: 2019-09-06 14:26 GMT

ಕೊಪ್ಪಳ, ಸೆ.6: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಎನ್‌ಇಕೆಆರ್‌ಟಿಸಿ)ದ ಅಧಿಕಾರಿಗಳು ಮಾನವೀಯತೆಯನ್ನೇ ಮರೆತಂತಿದ್ದು, ಮಗಳು ಮೃತಪಟ್ಟ ವಿಷಯವನ್ನೇ ಮುಚ್ಚಿಟ್ಟು ನಿರ್ವಾಹಕನನ್ನು ಕೆಲಸಕ್ಕೆ ಕಳುಹಿಸಿರುವ ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ.

ಗಂಗಾವತಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಪೋದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಗಂಗಾವತಿಯಿಂದ ಕೊಲ್ಲಾಪುರಕ್ಕೆ ತೆರಳುವ ಬಸ್‌ಗೆ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ ಎಂಬುವರ ಪುತ್ರಿಯು ಮೃತಪಟ್ಟಿದ್ದರು. ಆದರೆ, ಅವರಿಗೆ ಕೊನೆಕ್ಷಣದಲ್ಲಿ ಮಗಳ ಮುಖವನ್ನು ನೋಡಲು ಅವಕಾಶ ನೀಡದೆ, ಅಂತ್ಯ ಸಂಸ್ಕಾರಕ್ಕೂ ಅವಕಾಶ ಕಲ್ಪಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ನಿರ್ವಾಹಕ ಆರೋಪಿಸಿದ್ದಾರೆ.

ಬಾಗಲಕೋಟೆ ತಾಲೂಕು ರಾಂಪೂರದಲ್ಲಿ ಬುಧವಾರ ಬೆಳಗ್ಗೆ 10ಕ್ಕೆ ನಿರ್ವಾಹಕನ 11 ವರ್ಷದ ಮಗಳು ಕವಿತಾ ಮೃತಪಟ್ಟಿದ್ದಳು. ಈ ವಿಷಯವನ್ನು ಬುಧವಾರ 10ಕ್ಕೆ ಗಂಗಾವತಿ ಬಸ್ ಡಿಪೋಗೆ ದೂರವಾಣಿ ಕರೆ ಮಾಡಿ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ಮೃತಪಟ್ಟ ವಿಷಯ ತಿಳಿಸಿದರೂ ಅದನ್ನು ಮುಚ್ಚಿಟ್ಟು ನಿರ್ವಾಹಕನನ್ನು ಗಂಗಾವತಿ ಡಿಪೋ ಅಧಿಕಾರಿಗಳು ಕೆಲಸಕ್ಕೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಮಗಳ ಅಂತಿಮ ದರ್ಶನವನ್ನು ಕಸಿದ ಡಿಪೋ ಅಧಿಕಾರಿಗಳು ನಡೆಗೆ ಆಕ್ರೋಶ ವ್ಯಕ್ತವಾಗಿದ್ದು, ಕರ್ತವ್ಯ ಮುಗಿದ ನಂತರ ವಿಷಯ ತಿಳಿದು ನಿರ್ವಾಹಕ ದಿಗ್ಭ್ರಮೆಗೊಂಡಿದ್ದಾರೆ ಎನ್ನಲಾಗಿದೆ.

ಮೃತಪಟ್ಟ ನಿರ್ವಾಹಕರ ಪುತ್ರಿ ಕವಿತಾಳನ್ನು ಗುರುವಾರ ಅಂತ್ಯಸಂಸ್ಕಾರ ಮಾಡಲಾಗಿದ್ದು, ಗುರುವಾರ ರಾತ್ರಿ ಕರ್ತವ್ಯದಿಂದ ನಿರ್ಗಮಿಸುವ ವೇಳೆ ವಿಷಯ ತಿಳಿದಿದೆ. ಆದರೂ, ಇಂದೂ ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಈ ಕುರಿತು ಸಹೋದ್ಯೋಗಿ ಸಿಬ್ಬಂದಿ ಜತೆ ನಿರ್ವಾಹಕ ಮಂಜುನಾಥ್ ಅಳಲನ್ನು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News