ಅತಿವೃಷ್ಟಿ ಪರಿಹಾರ ಸರ್ಕಾರದ ಆದ್ಯತೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-09-07 08:44 GMT

ಮೈಸೂರು, ಸೆ.7: ರಾಜ್ಯದಲ್ಲಿ ಅತಿವೃಷ್ಟಿ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಅಧ್ಯಯನ ತಂಡವೂ ಅಗಮಿಸಿ ವಾಸ್ತವ ಪರಿಶೀಲಿಸಿ ತೆರಳಲಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವುದಕ್ಕಾಗಿ ಶನಿವಾರ ಜಲಾಶಯದ ಸಮೀಪ ಬೀಚನಹಳ್ಳಿ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಮುಖ್ಯಮಂತ್ರಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ರಾಜ್ಯ ಭೇಟಿಗೆ  ಆಗಮಿಸಿದ್ದ ಪ್ರಧಾನಿಯವರಿಗೆ ರಾಜ್ಯದ  ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ. ಶೀಘ್ರವೇ ಪರಿಹಾರ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ. ರಾಜ್ಯ ಸರ್ಕಾರದಿಂದ ಬೇರೆಲ್ಲಾ ಕೆಲಸಗಳನ್ನು ಬದಿಗೊತ್ತಿ ಅತಿವೃಷ್ಟಿ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ .ಪರಿಹಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ  ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಚಾಲನೆ ನೀಡುವ ಕುರಿತು ಮತ್ತೆ  ಪ್ರಯತ್ನ ನಡೆಸಲಾಗುವುದು  ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ  ಮುಖ್ಯಮಂತ್ರಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮೈಸೂರು ಜಿಲ್ಲಾಡಳಿತದ ವತಿಯಿಂದ ಬರಮಾಡಿಕೊಳ್ಳಲಾಯಿತು.

ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ. ವಿ ಸೋಮಣ್ಣ,ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್, ಶಾಸಕರಾದ ಅನಿಲ್ ಚಿಕ್ಕಮಾದು ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News