ರಾಜ್ಯ ಬಿಜೆಪಿ ಸರಕಾರಕ್ಕೆ ಇನ್ನಿಬ್ಬರು ಉಪಮುಖ್ಯಮಂತ್ರಿಗಳು ?

Update: 2019-09-07 13:22 GMT

ಬೆಂಗಳೂರು, ಸೆ.7: ರಾಜ್ಯ ಸರಕಾರದಲ್ಲಿ ಈಗಾಗಲೇ ಅಧಿಕಾರ ವಹಿಸಿಕೊಂಡ ಮೂವರು ಉಪಮುಖ್ಯಮಂತ್ರಿಗಳ ಜೊತೆಗೆ ಇನ್ನಿಬ್ಬರನ್ನು  ಉಪಮುಖ್ಯಮಂತ್ರಿಗಳನ್ನಾಗಿ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಹೊಸ ಇಬ್ಬರು ಉಪಮುಖ್ಯಮಂತ್ರಿಗಳು ಎರಡು ಪ್ರಮುಖ ಸಮುದಾಯಗಳಿಂದ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಪರಿಶಿಷ್ಟ ಪಂಗಡ ಮತ್ತು ಕುರುಬ ಸಮುದಾಯದಕ್ಕೆ ಸೇರಿದ ತಲಾ ಒಬ್ಬರು ಉಪಮುಖ್ಯಮಂತ್ರಿ ಆಗಲಿದ್ದು, ಈ ಮೂಲಕ ರಾಜ್ಯ ಸರಕಾರವು ಒಟ್ಟು ಐದು ಉಪಮುಖ್ಯಮಂತ್ರಿಗಳನ್ನು ಹೊಂದಲಿದೆ. ಪ್ರಸಕ್ತ ರಾಜ್ಯದಲ್ಲಿರುವ ಡಿಸಿಎಂ ಗಳು ಪರಿಶಿಷ್ಟ ಜಾತಿ (ಗೋವಿಂದ ಕಾರಜೋಳ), ಲಿಂಗಾಯತ (ಲಕ್ಷ್ಮಣ ಸವದಿ) ಹಾಗೂ ಒಕ್ಕಲಿಗ (ಸಿಎನ್ ಅಶ್ವತ್ ನಾರಾಯಣ್) ಸಮುದಾಯಗಳಿಂದ ಬಂದವರು.

ಈ ಐದು ಸಮುದಾಯಗಳು ರಾಜ್ಯದಲ್ಲಿ ಸರಿಸುಮಾರು 70% ಜನಸಂಖ್ಯೆಯನ್ನು ಹೊಂದಿದ್ದು, ಈ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಮತ ಬ್ಯಾಂಕ್ ಹಾಗೂ ಪ್ರಮುಖ ಸಮುದಾಯಗಳನ್ನು ಸಂತೋಷದಿಂದ ಇರಿಸುವ ಉದ್ದೇಶವಿರಿಸಿದೆ ಎನ್ನಲಾಗಿದೆ. 

ಅನರ್ಹಗೊಂಡ 17 ಶಾಸಕರ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರವೇ ನೂತನ ಎರಡು ಡಿಸಿಎಂ ಸ್ಥಾನಗಳನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಶಾಸಕರ ಅನರ್ಹತೆಯನ್ನು ರದ್ದುಗೊಳಿಸಿದರೆ ಬಿಜೆಪಿಯು ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಿದ್ದು, ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೆ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಈ ಹುದ್ದೆಗೆ ನೇಮಿಸುವ ಸಾಧ್ಯತೆಗಳಿವೆ.

ಕುರುಬ ಸಮುದಾಯಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಪಕ್ಷವು ಇನ್ನೂ ಹೆಸರುಗಳನ್ನು ಅಂತಿಮಗೊಳಿಸಿಲ್ಲ ಎಂದು ಮೂಲಗಳು ತಿಳಿಸಿದ್ದಾಗಿ ಪತ್ರಿಕೆಯು ವರದಿ ಮಾಡಿದ್ದು, ಅನರ್ಹ ಶಾಸಕರಲ್ಲಿ ಸಮುದಾಯದಿಂದ ಯಾವುದೇ ಅಸಾಧಾರಣ ಹೆಸರುಗಳಿಲ್ಲದ ಕಾರಣ ಪಕ್ಷವು ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಉಪ ಸಿಎಂ ಆಗಿ ನೇಮಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News