ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಅಧಿಕಾರಿಗಳಿಗೆ ಸಂಸದೆ ಸುಮಲತಾ ಎಚ್ಚರಿಕೆ

Update: 2019-09-07 17:08 GMT

ಪಾಂಡವಪುರ, ಸೆ.7: ಕೆಲವು ಇಲಾಖೆಗಳ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಬಹಳ ದೂರುಗಳು ಬರುತ್ತಿದ್ದು, ಜನರಿಗೆ ಸ್ಪಂದಿಸಿ ಜನರ ಅನುಕೂಲಕ್ಕಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ತಮ್ಮಿಷ್ಟದಂತೆ ಕೆಲಸ ಮಾಡಿದರೆ ಸಹಿಸಿಕೊಂಡು ಇರುವುದಿಲ್ಲ. ಜೊತೆಗೆ, ಕ್ಷಮೆ ಕೂಡ ನೀಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಎಚ್ಚರಿಸಿದ್ದಾರೆ.

ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕೃಷಿ, ತೋಟಗಾರಿಕೆ, ರೇಷ್ಮೆ, ಅಬಕಾರಿ, ಶಿಕ್ಷಣ, ಅರಣ್ಯ, ಸಹಕಾರ, ಕಂದಾಯ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಇಲಾಖಾವಾರು ಮಾಹಿತಿ ಪಡೆದು ಅವರು ಮಾತನಾಡಿದರು. 

ಯಾವ ಕ್ಷಣದಲ್ಲಾದರೂ ನಾನು ಇಲಾಖೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ತಪ್ಪು ಕಂಡು ಬಂದರೆ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳುಲಾಗುವುದು.  ಸಾರ್ವಜನಿಕರಿಗೆ ನೀವು ಕಚೇರಿಯಲ್ಲಿ ಸಿಗುವುದಿಲ್ಲವೆಂದು ದೂರು ಬಂದಿದೆ. ನಿಮ್ಮ ಇಲಾಖೆಯ ಇತರೆ ಅಧಿಕಾರಿಗಳು ಸಿಗುವುದಿಲ್ಲ ಎಂದರೆ ಸಾರ್ವಜನಿಕರ ಕೆಲಸ ಹೇಗೆ ಮಾಡುತ್ತೀರಿ ಎಂದು ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರನ್ನು ಪ್ರಶ್ನಿಸಿದರು.

ಅಭಿವೃದ್ಧಿ ವಿಚಾರ ಮತ್ತು ಇಲಾಖಾವಾರು ಪ್ರಗತಿಯ ಅಂಕಿ ಅಂಶಗಳನ್ನು ಕೇವಲ ಕೇಲಲು ಚೆನ್ನಾಗಿರುತ್ತದೆ. ಆದರೆ, ಜನರ ಮುಂದೆ ಹೋದಾಗ ಪ್ರಗತಿಯ ವಾಸ್ತವಾಂಶ ತಿಳಿಯುತ್ತದೆ. ಹೀಗಾಗಿ ಅಧಿಕಾರಿಗಳು ಪ್ರಗತಿಯನ್ನು ಕೇವಲ ಪುಸ್ತಕದಲ್ಲಿ ದಾಖಲಿಸಲು ಸೀಮಿತಗೊಳಿಸದೆ ಅತ್ಯಂತ ಎಚ್ಚರದಿಂದ ಕೆಲಸ ನಿರ್ವಹಿಸುವಂತೆ ಅವರು ಸೂಚಿಸಿದರು.

ಸಭೆ ನಡೆಯುವಾಗ ಪದೇ ಪದೇ ವಿದ್ಯುತ್ ಕಡಿತಗೊಂಡ ಹಿನ್ನೆಲೆಯಲ್ಲಿ ಸೆಸ್ಕ್ ಅಧಿಕಾರಿಗಳಿಗೆ ಪ್ರಶ್ನಿಸಿದ ಸಂಸದೆ ಸುಮಲತಾ ಅಂಬರೀಶ್, ನನ್ನ ಕಣ್ಮುಂದೆಯೇ ಸಭೆ ನಡೆಯುವಾಗಲೇ ವಿದ್ಯುತ್ ನಿರಂತರ ಕಡಿತಗೊಳ್ಳುತ್ತಿದೆ. ಇನ್ನೂ ತಾಲೂಕಿನಾದ್ಯಂತ ನೀವು ವಿದ್ಯುತ್ ನಿರ್ವಹಣೆ ಹೇಗೆ ಮಾಡುತ್ತೀರಿ ಎಂದು ಗದರಿದರು.

ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಲೋಕೋಪಯೋಗಿ ಇಲಾಖೆ ಎಇಇ ಕಿಜರ್ ಅಹ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನಾದ್ಯಂತ ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿದೆ. ದೂರು ನೀಡಿದರೂ ಕ್ರಮವಹಿಸಿಲ್ಲವೇಕೆ ಎಂದು ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಕಿಡಿಕಾರಿದರು.

ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ಪಿಐ ಸಿ.ಎಂ.ರವೀಂದ್ರ, ತಾಪಂ ಅಧ್ಯಕ್ಷೆ ಸುಮಲತಾ ಎನ್.ಜೆ.ಮಹೇಶ್, ಉಪಾಧ್ಯಕ್ಷೆ ಎಚ್.ಲಕ್ಷ್ಮಮ್ಮರಂಗಸ್ವಾಮಿ, ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಅನುಸೂಯ, ಶಾಂತಲಾ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News