ಅಕ್ರಮ ತಡೆಯಲು ಹೋರಾಡುತ್ತೇನೆ, ನೀವು ನನ್ನೊಂದಿಗಿರಿ: ಸುಮಲತಾ ಅಂಬರೀಷ್

Update: 2019-09-07 17:11 GMT

ಪಾಂಡವಪುರ, ಸೆ.7: ಕೇವಲ ಚರ್ಚೆ ಮತ್ತು ಭಾಷಣದಿಂದ ಅಕ್ರಮ ಗಣಿಗಾರಿಕೆ, ಇತರ ಅಕ್ರಮಗಳನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ಹೋರಾಟದ ಅಗತ್ಯವಿದೆ. ನೀವು ನನ್ನೊಂದಿಗೆ ಸದಾ ಇದ್ದರೆ ಹೋರಾಟ ನಡೆಸುವೆ ಎಂದು ಸಂಸದೆ ಸುಮಲತಾ ಅಂಬರೀಷ್ ಭರವಸೆ ನೀಡಿದ್ದಾರೆ.

ತಾಲೂಕಿನ ಹರಳಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆಂಪಿಕೊಳ ಲೋಕಾರ್ಪಣೆ ಮತ್ತು ಕೊಳಕ್ಕೆ ಬಾಗಿನ ಅರ್ಪಿಸಿದ ಮಾತನಾಡಿದ ಅವರು, ತಾಲೂಕಿನ ಬೇಬಿ ಬೆಟ್ಟ ಕಾವಲ್ ಪ್ರದೇಶದ ಅಕ್ರಮ ಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಗೆ ಎದುರಾಗಿರುವ ಅಪಾಯ ಹಾಗು ಜಿಲ್ಲೆಯ ರೈತರ ಸಂಕಷ್ಟಗಳ ಕುರಿತು ಸದನದಲ್ಲಿ ಚರ್ಚೆ ನಡೆಸಿದ್ದು, ಕೇಂದ್ರ ಸರಕಾರದ ಗಮನ ಸೆಳೆದಿದ್ದೇನೆ ಎಂದರು.

ನನ್ನ ಗೆಲುವಿಗೆ ಸಹಕರಿಸಿದ ರೈತಸಂಘದ ನಾಯಕರು ನನಗೆ ಬೆಂಬಲ ಸೂಚಿಸುವ ಮುನ್ನ ಕೆಆರ್‍ಎಸ್ ಅಣೆಕಟ್ಟೆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಹೋರಾಟ ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು. ಅದರಂತೆ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿ ನುಡಿದಂತೆ ನಡೆದಿದ್ದೇನೆ ಎಂದು ಅವರು ಹೇಳಿದರು.

ನನ್ನ ಗೆಲುವಿಗೆ ಬಿಜೆಪಿ ಮತ್ತು ರೈತಸಂಘದ ಕಾರ್ಯಕರ್ತರು ಬಹಳಷ್ಟು ಶ್ರಮಿಸಿದರು. ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಜನರಿಂದ ನಾನು ಸಂಸದೆಯಾಗಿ ಆಯ್ಕೆಯಾಗಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಅವರು ಭರವಸೆ ನೀಡಿದರು.

ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ, ಎಸಿ ಶೈಲಜಾ, ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ತಾಲೂಕು ಅಧ್ಯಕ್ಷ ಅಂಬಿಸುಬ್ಬಣ್ಣ, ತಾಪಂ ಸದಸ್ಯ ಪದ್ದಣ್ಣ, ಎಲೆಕೆರೆ ಈರೇಗೌಡ, ಚಿಕ್ಕರಂಗಯ್ಯ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News