ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಗೋಮೂತ್ರ ಸೇವಿಸುತ್ತಿದ್ದರು: ಕೇಂದ್ರ ಸಚಿವ

Update: 2019-09-08 16:36 GMT

ಪಾಟ್ನಾ, ಸೆ. 8: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ವೈದ್ಯಕೀಯ ಲಾಭಕ್ಕಾಗಿ ಗೋಮೂತ್ರ ಸೇವಿಸುತ್ತಿದ್ದರು ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ರವಿವಾರ ಹೇಳಿದ್ದಾರೆ. ಔಷಧಗಳನ್ನು ಸಿದ್ಧಪಡಿಸಲು ಹಾಗೂ ಅದನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಲು ಗೋಮೂತ್ರ ಬಳಸುವ ದಿಶೆಯಲ್ಲಿ ಆಯುಷ್ ಸಚಿವಾಲಯ ಗಂಭೀರ ಸಂಶೋಧನೆ ಯಲ್ಲಿ ತೊಡಗಿಕೊಂಡಿದೆ ಎಂದು ಅವರು ತಿಳಿಸಿದರು. ‘‘ಗೋಮೂತ್ರ ಪ್ರಭಾವಶಾಲಿ. ಇದನ್ನು ಅನನ್ಯ ಎಂದು ಪರಿಗಣಿಸಲಾಗುತ್ತಿದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಗುಣ ಇದಕ್ಕಿದೆ. ಔಷಧಗಳನ್ನು ಸಿದ್ಧಪಡಿಸಲು ಹಾಗೂ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಗೋಮೂತ್ರ ಬಳಸುವ ದಿಶೆಯಲ್ಲಿ ಆಯುಷ್ ಸಚಿವಾಲಯ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಕ್ಯಾನ್ಸರ್ಗೆ ಹೇಗೆ ಔಷಧ ತಯಾರಿಸುವುದು ಎಂಬ ಬಗ್ಗೆ ಚರ್ಚೆ ಹಾಗೂ ಪ್ರಯತ್ನ ನಡೆಯುತ್ತಿದೆ’’ ಎಂದು ಚೌಬೆ ಹೇಳಿದರು. ಗೋಮೂತ್ರದ ಸಂಶೋಧನೆ ಬಗ್ಗೆ ಒತ್ತಿ ಹೇಳಿದ ಅವರು, ‘‘ಜನರು ರೋಗದಿಂದ ಗುಣಮುಖರಾಗಲು ಗೋಮೂತ್ರ ಸೇವಿಸುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ನಮ್ಮ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಕೂಡ ಗೋಮೂತ್ರ ಸೇವಿಸುತ್ತಿದ್ದರು. ಗೋಮೂತ್ರದ ಬಗ್ಗೆ ಸಂಶೋಧನೆ ನಡೆಸುವ ಅಗತ್ಯ ಇದೆ’’ ಎಂದರು. ‘‘ಹಲವು ಔಷಧಗಳ ಸಿದ್ದಪಡಿಸುವಿಕೆಯಲ್ಲಿ ಗೋಮೂತ್ರ ಬಳಸಲಾಗುತ್ತಿದೆ. ಕ್ಯಾನ್ಸರ್ನಂತಹ ಗುಣವಾಗದ ಕಾಯಿಲೆಯ ಚಿಕಿತ್ಸೆಗೆ ಕೂಡ ಗೋಮೂತ್ರ ಬಳಸಲಾಗುತ್ತದೆ. ದೇಶೀ ತಳಿಯ ಗೋವುಗಳ ಮೂತ್ರವನ್ನು ಇದಕ್ಕೆ ಬಳಸಲಾಗುತ್ತಿದೆ. ಆಯುಷ್ ಸಚಿವಾಲಯ ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಸಂಶೋಧನೆ ನಡೆಸುತ್ತಿದೆ’’ ಎಂದು ಅವರು ಶನಿವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News