ಒಳಮೀಸಲಾತಿಗೆ ಕೇಂದ್ರವನ್ನು ಒತ್ತಾಯಿಸಿಲು ಡಾ.ಎಲ್.ಹನುಮಂತಯ್ಯ ಕರೆ

Update: 2019-09-08 18:37 GMT

ಮಂಡ್ಯ, ಸೆ.8: ಸಂವಿಧಾನಕ್ಕೆ ತಿದ್ದುಪಡಿ ತಂದು ಪರಿಶಿಷ್ಠ ಜಾತಿಯ ಮೀಸಲಾತಿಯಲ್ಲಿ ಮಾದಿಗ ಜನಾಂಗದ ಅಭಿವೃದ್ಧಿಗಾಗಿ ಒಳಮೀಸಲಾತಿ ನೀಡಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ಹಾಗು ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಕರೆ ನೀಡಿದ್ದಾರೆ.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಡಾ.ಬಾಬುಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾ ಘಟಕ ರವಿವಾರಆಯೋಜಿಸಿದ್ದ ಸಮುದಾಯದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗು ಒಳಮೀಸಲಾತಿ-ಮಾದಿಗರ ಸ್ಥಿತಿಗತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮೀಸಲಾತಿಯಲ್ಲಿ ಒಳಮೀಸಲಾತಿ ತರುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರ ಇದ್ದು, ರಾಜ್ಯ ಸರಕಾರಕ್ಕಿಲ್ಲ ಎಂಬುದನ್ನು ಸುರ್ಪೀಂಕೋರ್ಟ್ ಹೇಳಿದೆ. ಆದ್ದರಿಂದ ಸಂವಿಧಾನಕ್ಕೆ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿಗೊಳಿಸುವಂತೆ ಕೇಂದ್ರಕ್ಕೆ ಒತ್ತಡ ತರಬೇಕು ಎಂದು ಅವರು ಹೇಳಿದರು.

ಮಾದಿಗ ಸಮುದಾಯವು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಂಘಟನಾತ್ಮಕವಾಗಿ ಹೋರಾಡಬೇಕು. ಇನ್ನಾದರೂ ವಿದ್ಯಾವಂತ ಸಮುದಾಯ, ಯುವಜನತೆ ಕೌಸಲ್ಯ ಜ್ಞಾನವನ್ನು ಹೆಚ್ಚಿಸಿಕೊಂಡು, ಸಮುದಾಯದ ಹೇಳಿಗೆಗೆ ಶ್ರಮಿಸಬೇಕಿದೆ ಎಂದು ಅವರು ಸಲಹೆ ನೀಡಿದರು. ದಲಿತ ಸಮುದಾಯದವರು ಉದ್ಯಮಶೀಲ ಪ್ರವೃತ್ತಿ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ಆರ್ಥಿಕ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ದಲಿತ ಸಮುದಾಯಗಳ ವಿದ್ಯಾವಂತರು ಉದ್ಯಮಗಳನ್ನು ಸ್ಥಾಪಿಸಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯ, ವಿದ್ಯಾವಂತರು ಸಮುದಾಯವನ್ನು ಜಾಗೃತಿ ಮೂಡಿಬೇಕಿದೆ, ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿ ಬೆನ್ನುತಟ್ಟುವ ಕಾರ್ಯಸಾಗಬೇಕಿದೆ ಎಂದರು.
ಶಿಕ್ಷಣವಿಲ್ಲದೆ ಸಾಮಾಜಿಕವಾಗಿ ಬದಲಾವಣೆಯಾಗುವುದಿಲ್ಲವೆಂಬುದನ್ನು ಸಮುದಾಯ ಇನ್ನೂ ತಿಳಿಯದಿರುವುದು ಶೋಚನೀಯ ಎಂದು ವಿಷಾದಿಸಿದ ಅವರು, ತಳಿತಕ್ಕೊಳಗಾದ ಸಮುದಾಯಗಳ ಪ್ರಗತಿಗಾಗಿ ಸರಕಾರಗಳು ಹೆಚ್ಚು ಒತ್ತುಕೊಡಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಾದಿಗ ಸಮುದಾಯದ 150ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಚಿತ್ರದುರ್ಗದ ಶ್ರೀ ಶಿವಶರಣ ಮಾದರಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಅಖಿಲ ಕರ್ನಾಟಕ ಡಾ.ಬಾಬುಜಗಜೀವನರಾಂ ಸಂಘಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ,ವಕೀಲ ಎನ್.ಆರ್.ಚಂದ್ರಶೇಖರ್, ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆಂಪಬೋರಯ್ಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News