4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಬಂಧನ

Update: 2019-09-08 18:44 GMT

ಮಡಿಕೇರಿ, ಸೆ.8: ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರ ಹಿಂಬದಿಯ ಬಾಗಿಲನ್ನು ಮುರಿದು ಮನೆಯಲ್ಲಿದ್ದ 4.5 ಲಕ್ಷ ಮೌಲ್ಯದ 420 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಕುಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಟ್ಟ ತೈಲ ಗ್ರಾಮದ ನಿವಾಸಿ ತೀತಿರ ದೇವಯ್ಯ(42) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ

ಘಟನೆ ವಿವರ: ಕುಟ್ಟ ಗ್ರಾಮದ ನಿವಾಸಿ ಚಕ್ಕೇರ ಸುನೀಲ್ ಮಂದಪ್ಪ ಎಂಬವರು ಆಗಸ್ಟ್ 8ರಂದು ಕುಟುಂಬ ಸಹಿತ ಕಾರ್ಯ ನಿಮಿತ್ತ ಮೈಸೂರಿಗೆ ತೆರಳಿದ್ದರು. ಇದನ್ನು ಅರಿತ ತೀತಿರ ದೇವಯ್ಯ ಮನೆಯ ಹಿಂಬದಿಯ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದನು. ಸುನೀಲ್ ಮಂದಪ್ಪ ಆಗಸ್ಟ್ 13 ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದ್ದು, ಅದೇ ದಿನ ಕುಟ್ಟ ಪೊಲೀಸರಿಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕಿತ ಆರೋಪಿ ತೀತಿರ ದೇವಯ್ಯನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಆರೋಪಿ ದೇವಯ್ಯ, ಮನೆ ಕಳವು ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ದ 454, 457, 380 ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಮಾರ್ಗದರ್ಶನದಲ್ಲಿ ವಿರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ಜಯಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈ ಕೃತ್ಯವನ್ನು ಬೇಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕುಟ್ಟ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಎಎಸ್‍ಐ ಮೊಹಿದ್ದೀನ್, ಸಿಬ್ಬಂದಿಗಳಾದ ದಿನೇಶ್, ರಂಜಿತ್, ಮಧು, ಕೃಷ್ಣಮೂರ್ತಿ, ಸುಕುಮಾರ್, ಶ್ರೀನಿವಾಸ್, ಉದಯ ಜೀಪು ಚಾಲಕ ಗಣಪತಿ ಅವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News