"ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ಈಡಿ, ಐಟಿ ಬಗ್ಗೆ ಕನಿಷ್ಠ ಜ್ಞಾನವಾದರೂ ಬೇಡವೇ ?"

Update: 2019-09-09 12:15 GMT

ಬೆಂಗಳೂರು, ಸೆ. 9: ‘ಒಬ್ಬ ಸಂಸದರಿಗೆ, ಅದರಲ್ಲೂ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ಈಡಿ, ಐಟಿ ಇಲಾಖೆ ಯಾರ ಅಧೀನದಲ್ಲಿ ಬರುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಬೇಡವೇ? ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. 

ಸೋಮವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಇದುವರೆಗೂ ಬಿಜೆಪಿ ಬೇರೆ-ಬೇರೆ ಕೋಮುಗಳ ನಡುವೆ ಬೆಂಕಿಹಚ್ಚಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಿತ್ತು, ಈಗ ತನ್ನ ಎದುರಾಳಿ ನಾಯಕರ ನಡುವೆ ಹುಳಿ ಹಿಂಡುವ ಹೀನ ಕಾರ್ಯಕ್ಕೆ ಇಳಿದಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಯನ್ನು ಖಂಡಿಸಿದ್ದಾರೆ.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ದಿನದಿಂದ ವರ್ಗಾವಣೆ ಮತ್ತು ದ್ವೇಷ ರಾಜಕಾರಣ ಬಿಟ್ಟು ಬೇರೇನು ಮಾಡುತ್ತಿಲ್ಲ. ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡವರ ಬದುಕು ಬೀದಿಗೆ ಬಂದಿದೆ, ಈಶ್ವರಪ್ಪನವರು ಈ ನಿರಾಶ್ರಿತರಿಗೆ 10 ಸಾವಿರ ರೂ.ಕೊಟ್ಟಿರುವುದೇ ಹೆಚ್ಚು ಎನ್ನುತ್ತಾರೆ. ಇಂಥವರಿಗೆ ಜನರ ಬಗ್ಗೆ ಕಾಳಜಿ, ಕರುಣೆ ಏನಾದರೂ ಇದೆಯೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾವ್ಯಾಕೆ ಬೇಡ ಎನ್ನಲಿ: ‘ನಮ್ಮ ಸರಕಾರದ ಅವಧಿಯ 5 ಯೋಜನೆಗಳನ್ನು ಯಡಿಯೂರಪ್ಪನವರು ತನಿಖೆಗೆ ಒಳಪಡಿಸುತ್ತಿರುವುದು ಬಹಳ ಸಂತೋಷ. ಬೆಟ್ಟ ಅಗೆದು ಇಲಿ ಹಿಡಿಯುವುದಿದ್ದರೆ ನಾವ್ಯಾಕೆ ಬೇಡ ಎನ್ನಲಿ! ಇದು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ಪ್ರಾರಂಭಿಸಿರುವ ಹೊಸ ನಾಟಕ ಎನ್ನುವುದನ್ನು ಅರಿಯದಷ್ಟು ರಾಜ್ಯದ ಜನ ಮುಗ್ಧರಲ್ಲ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಾಮಿಡಿ ಪಾತ್ರದ ಅಗತ್ಯ

 ‘ರಾಜ್ಯದ ಬಿಜೆಪಿ ನಾಟಕ ಮಂಡಳಿಗೆ ಕಾಮಿಡಿ ಪಾತ್ರದ ಅಗತ್ಯ ಇತ್ತು, ಅದಕ್ಕಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಪಕ್ಷಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರನ್ನು ಅವರ ಪಕ್ಷದವರೂ ಸೇರಿದಂತೆ ಯಾರೂ ಗಂಭೀರವಾಗಿ ತಗೊಳ್ತಿಲ್ಲ, ಅದಕ್ಕಾಗಿ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ’.

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News