ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು: ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ

Update: 2019-09-09 13:05 GMT

ಮಡಿಕೇರಿ, ಸೆ.9 : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಭಾರತೀಯ ಸರ್ವೇಕ್ಷಣಾ ಇಲಾಖಾ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ಪಡೆಯಲಾಗಿದೆ.   

ಈ ಬಗ್ಗೆ ಸೆ. 9 ರಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ, ತಹಶೀಲ್ದಾರ್ ಅವರು ಇತರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರಸ್ತೆಯಿಂದ 200 ಮೀಟರ್ ಎತ್ತರದಲ್ಲಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಳಭಾಗದಲ್ಲಿರುವ ಅಂಗಡಿಗಳ ಮಾಲಕರಿಗೆ ತಾತ್ಕಾಲಿಕವಾಗಿ ಅಂಗಡಿ ಖಾಲಿಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಳಭಾಗದಲ್ಲಿರುವ ಮನೆಗಳ ಮಾಲೀಕರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮನೆಗಳನ್ನು ಖಾಲಿ ಮಾಡಲು ಗ್ರಾಮ ಪಂಚಾಯತ್ ವತಿಯಿಂದ ನೊಟೀಸ್ ನೀಡಲಾಗಿದೆ. ಸದರಿ ಪ್ರದೇಶದ ಇನ್ನೊಂದು ಭಾಗದಲ್ಲಿ ಜಾರಿರುವ ಮಣ್ಣನ್ನು ತೆರವುಗೊಳಿಸಲು ಕ್ರಮ ವಹಿಸಲಾಗಿದೆ.  ಭೂ ಸರ್ವೇಕ್ಷಣಾ ಇಲಾಖೆಯ ಸಲಹೆಯಂತೆ ಬೆಟ್ಟದಲ್ಲಿ ಬಿರುಕು ಬಿಟ್ಟ ಸ್ಥಳದೊಳಗೆ ನೀರು ಹೋಗದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಹೊದಿಸಿ ಮಣ್ಣು ಮುಚ್ಚಲು ಕ್ರಮ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News