ಪಶ್ಚಿಮಬಂಗಾಳ: 12 ಗಂಟೆಗಳಲ್ಲಿ ಗುಂಪು ಥಳಿತದ 3 ಪ್ರಕರಣಗಳು ದಾಖಲು

Update: 2019-09-09 15:44 GMT

ಕೋಲ್ಕತ್ತಾ, ಸೆ. 9: ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ಕಳೆದ ವಾರ ಗುಂಪಿನಿಂದ ಥಳಿತ ತಡೆ ಮಸೂದೆ ಅಂಗೀಕರಿಸಿದ ಬಳಿಕ ಕಳೆದ 12 ಗಂಟೆಗಳಲ್ಲಿ 3 ಗುಂಪು ಥಳಿತದ ಪ್ರಕರಣಗಳು ದಾಖಲಾಗಿವೆ. ಅಸನ್ಸೋಲ್, ಉತ್ತರ ದಿನಜ್‌ಪುರ ಹಾಗೂ ಕೂಚ್‌ಬೆಹಾರ್ ಜಿಲ್ಲೆಗಳಲ್ಲಿ ಶನಿವಾರ ಸಂಜೆಯಿಂದ 3 ಪ್ರಕರಣಗಳು ದಾಖಲಾಗಿವೆ.

ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಎಲ್ಲ ಮೂರು ಪ್ರಕರಣಗಳಲ್ಲಿ ಮಕ್ಕಳ ಅಪಹರಣಕಾರರು ಎಂಬ ಶಂಕೆಯಲ್ಲಿ ಥಳಿಸಲಾಗಿದೆ. ಕೂಚ್‌ ಬೆಹಾರ್‌ನ ದಿನ್ಹಾಟಾ ಗ್ರಾಮದಲ್ಲಿ ಶನಿವಾರ ರಾತ್ರಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮಕ್ಕಳ ಅಪಹರಣಕಾರ ಎಂದು ಶಂಕಿಸಿ ಗುಂಪೊಂದು ಬರ್ಬರವಾಗಿ ಥಳಿಸಿದೆ. ಆತನನ್ನು ಜೋಸೆಫ್ ಸಂತಾಲ್ ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.

ಕೂಚ್‌ಬೆಹಾರ್ ಹಾಗೂ ಅಸನ್ಸೋಲ್‌ನಲ್ಲಿ ಶಂಕಿತ ವ್ಯಕ್ತಿಯೊಂದಿಗೆ ಪೊಲೀಸರು ಹಾಗೂ ನಾಗರಿಕ ಸ್ವಯಂ ಸೇವಾ ಕಾರ್ಯಕರ್ತರ ಮೇಲೆ ಕೂಡ ಗುಂಪು ದಾಳಿ ನಡೆದಿದೆ. ಈ ದಾಳಿಯಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ವಾಹನಗಳನ್ನು ಜಖಂಗೊಳಿಸಲಾಗಿದೆ. ಚೋರ್ಪಾ ಠಾಣೆಯ ಪೊಲೀಸರು ವೀಡಿಯೊ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ ಹಾಗೂ ಅಪರಾಧಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News