ಶಾಲೆ ಆರಂಭಕ್ಕೂ ಮುನ್ನವೇ ಪುಸ್ತಕ-ಸಮವಸ್ತ್ರ ವಿತರಣೆ: ಸಚಿವ ಸುರೇಶ್‌ ಕುಮಾರ್

Update: 2019-09-09 16:50 GMT

ರಾಮನಗರ, ಸೆ.9: ಮುಂದಿನ ವರ್ಷ ಶಾಲೆ ಆರಂಭಕ್ಕೂ ಮುನ್ನವೇ ಪುಸ್ತಕ, ಸಮವಸ್ತ್ರ ನೀಡುತ್ತೇವೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಸೋಮವಾರ ರಾಮನಗರ ತಾಲೂಕಿನ ಕೈಲಾಂಚ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗಳ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಮವಸ್ತ್ರ, ಪುಸ್ತಕ ನೀಡಿಕೆ ಸಂಬಂಧ ಪ್ರಸಕ್ತ ಸಾಲಿನಲ್ಲಿ ವಿಳಂಬವಾಗಿದೆ ಎಂಬ ದೂರಿದೆ. ಹೀಗಾಗಿ, ಈ ಎಲ್ಲ ಸಮಸ್ಯೆಗೆ ಪರಿಹಾರ ನೀಡುವ ಸಂಬಂಧ ಮುಂದಿನ ವರ್ಷದ ಶಾಲೆ ಆರಂಭದ ಮೊದಲ ದಿನವೆ ಮಕ್ಕಳಿಗೆ ಪುಸ್ತಕ, ಬಟ್ಟೆ ನೀಡಲಾಗುವುದು ಎಂದು ಅವರು ಹೇಳಿದರು.

ವಾರದ ಒಂದು ದಿನ ರಾಜ್ಯದ ಎಲ್ಲಾ ಮಕ್ಕಳು ಬ್ಯಾಗ್ ರಹಿತವಾಗಿ ಶಾಲೆಗೆ ಬರಲಿದ್ದಾರೆ. ಈ ಯೋಜನೆ ಸಂಬಂಧ ಚರ್ಚೆ ನಡೆಯುತ್ತಿದೆ. ಶೀಘ್ರವೇ ಎಲ್ಲ ಸಮಸ್ಯೆಗಳಿವೆ ಮುಕ್ತಿ ನೀಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಇಲ್ಲಿನ ವಸತಿ ಶಾಲೆಗಳ ಪರಿಸ್ಥಿತಿ ಕಳೆದ ವಾರ ಭೇಟಿ ನೀಡಿದ ಸಂದರ್ಭದಲ್ಲಿ ಇದ್ದಂತಿಲ್ಲ. ಸಾಕಷ್ಟು ಬದಲಾವಣೆಯಾಗಿದ್ದು, ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಹಾಗೂ ಸಮಾಜ ಕಲ್ಯಾಣ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News