ನೆರೆ ಪೀಡಿತ ಪ್ರದೇಶಕ್ಕೆ ಹಣ ಬಿಡುಗಡೆ ಮಾಡದಿರುವುದು ದುರ್ದೈವ: ಎಚ್.ಕೆ.ಪಾಟೀಲ್

Update: 2019-09-09 16:51 GMT

ಗದಗ, ಸೆ. 9: ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಕೇಂದ್ರ ಸರಕಾರ ಈವರೆಗೂ ಅನುದಾನ ಘೋಷಣೆ ಮಾಡದಿರುವುದು ದುರ್ದೈವ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಶಾಸಕ ಎಚ್.ಕೆ.ಪಾಟೀಲ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಸ್ವರೂಪದ ನೆರೆ ಬಂದಿದ್ದು, ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕಿತ್ತು. ಈವರೆಗೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.

2009ರಲ್ಲಿ ನೆರೆ ಬಂದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಖುದ್ದು ಪರಿಶೀಲನೆ ನಡೆಸಿ 1,600 ಕೋಟಿ ರೂ. ಪರಿಹಾರ ನೀಡಿದ್ದರು. ಆದರೆ, ಈ ಭಾರಿ ಪ್ರವಾಹ ಬಂದು ತಿಂಗಳು ಕಳೆದರೂ ಪ್ರಧಾನಿ ಮೋದಿ ಒಂದೇ ಒಂದು ಕವಡೆ ಕಾಸನ್ನು ನೀಡಿಲ್ಲ ಎಂದು ಪಾಟೀಲ್ ವಾಗ್ದಾಳಿ ನಡೆಸಿದರು.

ರಾಜ್ಯದ ಜನರ ಬಗ್ಗೆ ಪ್ರಧಾನಿ ಮೋದಿಯವರಿಗೆ ಎಷ್ಟು ಗೌರವವಿದೆ ಎಂಬುದರ ಸಂಕೇತ, ಸಂಕಷ್ಟಕ್ಕೆ ಸ್ಪಂದಿಸುವ ರೀತಿ ಇದು. ಬಿಜೆಪಿಯ ಇಪ್ಪತ್ತೈದು ಮಂದಿ ಸಂಸದರಿದ್ದಾರೆ. ಇವರದ್ದೆ ಸರಕಾರ ರಾಜ್ಯದಲ್ಲಿದೆ. ಆದರೂ, ಕೇಂದ್ರದಿಂದ ಅನುದಾನ ತರಲು ಇವರಿಗೆ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ಎಚ್ಚೆತ್ತುಕೊಂಡು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕು. ಆ ಮೂಲಕ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅಗತ್ಯ ಅನುದಾನ ತರುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಬೇಕು ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News