ಮಳೆ ಹಾನಿ, ಮೀನುಗಾರರ ಸಮಸ್ಯೆ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಅನಂತ್ ಕುಮಾರ್ ಹೆಗಡೆ

Update: 2019-09-09 16:56 GMT

ಬೆಂಗಳೂರು, ಸೆ.9: ಉತ್ತರ ಕನ್ನಡ ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೀಡಾಗಿರುವ ಕೆಲ ಮನೆಗಳಿಗೆ ಸರಿಯಾದ ದಾಖಲಾತಿಗಳಿಲ್ಲ. ಹಾಗಾಗಿ ಈ ಮನೆಗಳಿಗೆ ಪರಿಹಾರ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸಂಸದ ಅನಂತ್ ಕುಮಾರ್ ಹೆಗಡೆ ಮನವಿ ಮಾಡಿದ್ದಾರೆ.

ಸೋಮವಾರ ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಹಲವು ಮನೆಗಳು ನೀರಿನಲ್ಲಿ ಮುಳುಗಿದ್ದವು. ಹೀಗಾಗಿ, ಅವರಲ್ಲಿದ್ದ ದಾಖಲೆಗಳು ಎಲ್ಲವೂ ಹಾಳಾಗಿವೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯಿಂದ ಕೊಚ್ಚಿ ಹೋಗಿರುವ ಕೆಲ ಮನೆಗಳಿಗೆ ದಾಖಲೆ ಇಲ್ಲ. ಕೆಲವರು ಅರಣ್ಯ ಜಮೀನಿನಲ್ಲಿ ಅತಿಕ್ರಮಣ ಮಾಡಿ ಕೃಷಿ ಮಾಡುತ್ತಿದ್ದರು. ಇಂಥವರಿಗೆ ಪರಿಹಾರ ಸಿಗುತ್ತಿಲ್ಲ. ಪರಿಹಾರ ದೊರಕಿಸಿ ಎಂದು ಮನವಿ ಮಾಡಿದ್ದೇನೆ. ದಾಖಲಾತಿ ಇಲ್ಲದಿದ್ದರೂ ಮನೆ ಇದೆ ಎಂಬುದು ಗುರುತಾದರೆ ಪರಿಹಾರ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ಹೇಳಿದರು.

ನದಿ ದಂಡೆಯಲ್ಲಿ ಮನೆ ಕಟ್ಟಿರುವ ಮೀನುಗಾರರಿಗೆ ಮಾದರಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಕುಮುಟಾದಲ್ಲಿ 1+1 ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ. ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತಿದೆ. ಕರಾವಳಿ ಭಾಗದ ಮೀನುಗಾರರಿಗೆ ಮತ್ಸ ಕ್ಷಾಮದಿಂದ ಉಪವಾಸ ಮಲಗುತ್ತಿರುವುದನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಸಿಎಂ ಅವರೆಲ್ಲರಿಗೂ 10 ಸಾವಿರ ರೂ. ಪರಿಹಾರ ಕೊಡುವಂತೆ ಸ್ಥಳದಲ್ಲೇ ಆದೇಶಿಸಿದರು ಎಂದು ಹೆಗಡೆ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಮಳೆ ಹಾನಿ, ಮೀನುಗಾರರ ಎಲ್ಲ ಸಮಸ್ಯೆಗಳಿಗೂ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರದಿಂದ ನೆರೆ ಪರಿಹಾರ ವಿಳಂಬವಾಗುತ್ತಿದೆ ಎನ್ನುವ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನೆರೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೇಂದ್ರಕ್ಕೆ ನೀಡಬೇಕು. ಕೇಂದ್ರ ಸರಕಾರ ಯಾವತ್ತೂ ಯಾರೂ ಕೊಡದಷ್ಟು ಅನುದಾನ ಕೊಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ನೆರೆಯ ಹಾನಿ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ. ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎನ್ನುವ ನಂಬಿಕೆಯಿದೆ ಎಂದು ಹೆಗಡೆ ಪ್ರತಿಪಾದಿಸಿದರು.

ಕೆಲವೊಂದು ಕಡೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಕೆಲವೊಂದು ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿಯಿವೆ. ಸುಮಾರು 80 ಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದೆ. ಈ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಬಗ್ಗೆ ಸರಕಾರ ಆದೇಶ ಹೊರಡಿಸಬೇಕು ಎಂದೂ ಮನವಿ ಮಾಡಲಾಗಿದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.

ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರದ ಕುರಿತು ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಅವರು ಕೇಂದ್ರ ಸರಕಾರದ ಅಧೀನದಲ್ಲಿ ಬರುವ ಅಧಿಕಾರಿಯಾಗಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವುದು ಸರಿಯಲ್ಲ.

-ಅನಂತ್‌ ಕುಮಾರ್ ಹೆಗಡೆ, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News