ಪಾಕ್‌ನಲ್ಲಿ 1 ಬಿಲಿಯ ಡಾಲರ್ ಹೂಡಿಕೆಗೆ ಚೀನಾ ಯೋಜನೆ

Update: 2019-09-09 17:04 GMT

ಇಸ್ಲಾಮಾಬಾದ್, ಸೆ. 9: ಪಾಕಿಸ್ತಾನದ ಅಭಿವೃದ್ಧಿ ಯೋಜನೆಗಳಲ್ಲಿ 1 ಬಿಲಿಯ ಡಾಲರ್ (ಸುಮಾರು 7,100 ಕೋಟಿ ರೂಪಾಯಿ) ಹೂಡಿಕೆ ಮಾಡಲು ಚೀನಾ ಉದ್ದೇಶಿಸಿದೆ ಎಂದು ಪಾಕಿಸ್ತಾನಕ್ಕೆ ಚೀನಾದ ರಾಯಭಾರಿ ಯಾವೊ ಜಿಂಗ್ ಘೋಷಿಸಿದ್ದಾರೆ.

ಶನಿವಾರ ಇಸ್ಲಾಮಾಬಾದ್ ಮಹಿಳಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಭೆಯೊಂದನ್ನು ಉದ್ದೇಶಿಸಿದ ಮಾತನಾಡಿದ ವೇಳೆ ಅವರು ಈ ವಿಷಯವನ್ನು ಘೋಷಿಸಿದರು ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನಡಿ ಬರುವ ಅಭಿವೃದ್ಧಿ ಯೋಜನೆಗಳ ಕಾಮಗಾರಿ ವೇಗವು ತೃಪ್ತಿಕರವಾಗಿದೆ ಎಂದು ಹೇಳಿದ ಅವರು, ಚೀನಾ-ಪಾಕಿಸ್ತಾನ ಮುಕ್ತ ವ್ಯಾಪಾರ ಒಪ್ಪಂದದ ಎರಡನೇ ಹಂತವನ್ನು ಅಕ್ಟೋಬರ್‌ನಲ್ಲಿ ಅಂತಿಮಗೊಳಿಸಲಾಗುವುದು ಎಂದರು. ಆ ಬಳಿಕ, ಕೃಷ್ಯುತ್ಪನ್ನಗಳು ಮತ್ತು ಸಮುದ್ರ ಉತ್ಪನ್ನಗಳು ಸೇರಿದಮತೆ ಪಾಕಿಸ್ತಾನದ 90 ಶೇಕಡ ರಫ್ತುಗಳಿಗೆ ಶೂನ್ಯ ಶೇಕಡ ಸುಂಕವು ಅನ್ವಯವಾಗುವುದು ಎಂದು ಚೀನಾ ರಾಯಭಾರಿ ತಿಳಿಸಿದರು.

‘‘ಮಾರುಕಟ್ಟೆ ಪ್ರವೇಶ ಅವಕಾಶವು ಹೆಚ್ಚುವುದರಿಂದ ಪಾಕಿಸ್ತಾನದ ರಫ್ತು 500 ಮಿಲಿಯ ಡಾಲರ್ (ಸುಮಾರು 3,550 ಕೋಟಿ ರೂಪಾಯಿ)ನಷ್ಟು ಹೆಚ್ಚುತ್ತದೆ. ಇದು ದ್ವಿಪಕ್ಷೀಯ ವ್ಯಾಪಾರದ ಅಸಮಾನತೆಯನ್ನು ತಗ್ಗಿಸುತ್ತದೆ’’ ಎಂದು ಯಾವೊ ಜಿಂಗ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News