ಭೂಮಿಯೊಳಗೆ ಭಾರೀ ಸದ್ದು: ಪರಿಶೀಲನೆಗೆ ವಿಜ್ಞಾನಿಗಳ ತಂಡ- ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2019-09-09 17:47 GMT

ಚಿಕ್ಕಮಗಳೂರು, ಸೆ.9: ಇತ್ತೀಚೆಗೆ ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಗೊಳಗಾದ ಪ್ರದೇಶಗಳಲ್ಲಿ ಭಾರಿ ಮಳೆಯೊಂದಿಗೆ ಭೂಮಿಯಿಂದ ಭಾರೀ ಶಬ್ಧ ಕೇಳಿ ಬಂದಿತ್ತು ಎನ್ನಲಾದ ವಿದ್ಯಮಾನದ ಬಗ್ಗೆ ಸಂಶೋಧನೆ ನಡೆಸಲು ಜಿಲ್ಲೆಗೆ ಭೂವಿಜ್ಞಾನಿಗಳ ತಂಡ ಆಗಮಿಸಿದ್ದು, ವಿಜ್ಞಾನಿಗಳ ತಂಡಕ್ಕೆ ಜಿಲ್ಲಾಡಳಿತ ಅಗತ್ಯ ಮಾಹಿತಿಯನ್ನು ನೀಡಿದೆ. ಭೂವಿಜ್ಞಾನಿಗಳ ತಂಡ ಆ ಶಬ್ದದ ಬಗ್ಗೆ ಶೀಘ್ರದಲ್ಲಿಯೇ ವರದಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮಲೆನಾಡಿನಲ್ಲಿ ಭಾರಿ ಮಳೆಯಿಂದ ಸಂಕಷ್ಟಕ್ಕೊಳಗಾಗಿರುವ ಮಲೆಮನೆಯ ಕೆಲವು ಕುಟುಂಬಗಳು, ಅಲೆಖಾನ್ ಹೊರಟ್ಟಿ, ಮಧುಗುಂಡಿ ಗ್ರಾಮದ ಸಂತ್ರಸ್ಥರು ಬೇರೆಡೆಗೆ ಸ್ಥಳಾಂತರಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರ ಪುನರ್ವಸತಿಗೆ ಅಗತ್ಯವಿರುವ ಭೂಮಿ ಮತ್ತು ಮನೆ ನಿರ್ಮಾಣಕ್ಕೆ ಜಿಲ್ಲೆಯ ಒಂದೇ ಭಾಗದಲ್ಲಿ ಜಾಗ ಲಭ್ಯವಿಲ್ಲ. ಈ ಕಾರಣಕ್ಕೆ ಮೂಡಿಗೆರೆ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಮಿ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕಳೆದ 3-4 ದಿನಗಳಿಂದ ಜಿಲ್ಲೆಯ ಬಣಕಲ್, ಕೊಟ್ಟಿಗೆಹಾರ, ಮೂಡಿಗೆರೆ ಭಾಗಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಶಿರವಾಸೆ, ಮೂಡಿಗೆರೆ ಭಾಗದಲ್ಲಿ ಮಾತ್ರ ಭೂ ಕುಸಿತವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಜಿಲ್ಲೆಯಲ್ಲಿ ಬಿದಿರುತಳ, ಕುದುರೆಮುಖ ಪುನರ್ವಸತಿ, ಭದ್ರಾ ಪುನರ್ವಸತಿ ಸೇರಿದಂತೆ ಹಲವು ಪುನರ್ವಸತಿ ಯೋಜನೆಗಳು ಭೂಮಿ ಲಭ್ಯವಿಲ್ಲದೇ ನೆನೆಗುದಿಗೆ ಬಿದ್ದಿವೆ. ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಅನುದಾನದಲ್ಲೇ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಶಾಶ್ವತವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.

ಮಧುಗುಂಡಿ, ಅಲೆಖಾನ್‍ ಹೊರಟ್ಟಿಯಲ್ಲಿ ಮನೆ ಕಳೆದುಕೊಂಡವರೂ ಸೇರಿದಂತೆ ಸುಮಾರು 100ರಿಂದ 120 ಮಂದಿ ಸಂತ್ರಸ್ತರು ಬಿದರಹಳ್ಳಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಈಗಾಗಲೇ ಅವರಿಗೆ ತಾತ್ಕಾಲಿಕ ಪರಿಹಾರದ ಧನವನ್ನು ನೀಡಲಾಗಿದೆ. ಅದರೊಂದಿಗೆ 10 ತಿಂಗಳ ಕಾಲಮಿತಿ ನೀಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು. ಪ್ರತೀ ತಿಂಗಳಿಗೆ 5 ಸಾವಿರ ರೂ. ಬಾಡಿಗೆ ಹಣವನ್ನು ಸಹ ನೀಡುವ ಭರವಸೆಯನ್ನು ಸರಕಾರ ನೀಡಿದೆ. ಆದರೆ ಸಂತ್ರಸ್ಥರು ಕಾಳಜಿ ಕೇಂದ್ರಗಳಿಂದ ತಮ್ಮ ಮನೆಗಳಿಗೆ ಹೋಗಲು ಒಪ್ಪುತ್ತಿಲ್ಲ ಎಂದು ಹೇಳಿದ ಅವರು, ಅಗತ್ಯ ಸೌಕರ್ಯ ನೀಡಬಹುದು, ಆದರೆ ಬಾಡಿಗೆ ಮನೆ ಕೊಡಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಹೊರಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಲ್ಲೆಯ ಕಡೂರು, ಚಿಕ್ಕಮಗಳೂರು ಮತ್ತು ಲಕ್ಯಾಭಾಗದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂಬರುವ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದ ಅವರು, ಕರಗಡದ ದೇವಿಕೆರೆಯಿಂದ ಕಳಸಾಪುರ ಕೆರೆಗೆ ನೀರು ಹರಿದ ಪರಿಣಾಮ ಕೆರೆ ಪೂರ್ಣ ಭರ್ತಿಯಾಗಿದೆ ಎಂದರು.

ನೆರೆಪೀಡಿತ ಪ್ರದೇಶಗಳಾದ ಕಸ್ಕೆಬೈಲು ಸೇರಿದಂತೆ ಜಮೀನುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ಲೋಕೋಪಯೋಗಿ ಇಲಾಖೆ ರಾಜಸ್ವ ಪಾವತಿಸಿ ಜಮೀನುಗಳ ಮಾಲಕರು ತಮ್ಮ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳಬಹುದಾದೆಂಬ ಸರಕಾರದ ಆದೇಶವನ್ನು ಈಗಾಗಲೇ ಅವರಿಗೆ ಮಾಹಿತಿ ನೀಡಲಾಗಿದೆ.
- ಡಾ.ಬಗಾದಿ ಗೌತಮ್, ಡಿಸಿ

ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಅತಿಯಾದ ಮಳೆ, ಭೂಕುಸಿತ, ಜಲಪಾತಗಳ ನೀರು, ರಸ್ತೆಯಲ್ಲಿಯೇ ಹರಿಯುತ್ತಿರುವುದು ಮತ್ತು ಮಂಜು ಕವಿದ ವಾತಾವರಣ ಪ್ರತಿದಿನ ಇದೆ. ಅಲ್ಲಿ ವಾಹನಗಳು ಸಂಚರಿಸುವುದು ದುಸ್ತರವಾಗಿರುವುದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಎಲ್ಲಾ ಸಮಸ್ಯೆಗಳು ಪರಿಹಾರವಾಗುವವರೆಗೂ ವಾಹನ ಸಂಚಾರಕ್ಕೆ ಚಿಕ್ಕಮಗಳೂರು ಮತ್ತು ದಕ ಜಿಲ್ಲಾಡಳಿತಗಳು ನಿರ್ಬಂಧ ಹೇರಿದೆ.

- ಡಾ.ಬಗಾದಿ ಗೌತಮ್, ಡಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News