ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಚಾರ: ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ ಸರಕಾರ

Update: 2019-09-09 18:03 GMT

ಬೆಂಗಳೂರು, ಸೆ.9: ವನ್ಯಜೀವಿ ಮಂಡಳಿಯ ಅನುಮತಿ ಪಡೆಯದೇ ಬೆಳಗಾವಿಯ ಖಾನಾಪುರದಿಂದ ಗೋವಾಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದರಿಂದ ಹೈಕೋರ್ಟ್ ವಿಚಾರಣೆಯನ್ನು ಅ.17ಕ್ಕೆ ಮುಂದೂಡಿದೆ.

ಈ ಕುರಿತು ಪರಿಸರವಾದಿ ಸುರೇಶ್ ಹೆಬ್ಳಿಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ವನ್ಯಜೀವಿ ಮಂಡಳಿಯ ಅನುಮತಿಯನ್ನು ಪಡೆಯದೇ ಬೆಳಗಾವಿಯ ಖಾನಾಪುರದಿಂದ ಗೋವಾಗೆ ರಾಷ್ಟ್ರೀಯ 4ಎ ರಸ್ತೆ ನಿರ್ಮಾಣ ಮಾಡಲು ಎನ್‌ಎಚ್‌ಎಐ ಸಿದ್ಧತೆ ಮಾಡಿದೆ. ಇದರಿಂದ, ವನ್ಯಜೀವಿಗಳ ಪ್ರಾಣಕ್ಕೆ ಅಪಾಯವಿದೆ. ಅಪಾರ ಪ್ರಮಾಣದ ಮರಗಳನ್ನು ಕತ್ತರಿಸುವುದರಿಂದ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.

ಈ ಹಿಂದೆ ವಾದ ಆಲಿಸಿದ್ದ ನ್ಯಾಯಪೀಠವು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಅರಣ್ಯ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಸೂಚಿಸಿತ್ತು. ಇಂದು ಸರಕಾರದ ಪರ ವಕೀಲರು ಆಕ್ಷೇಪಣೆ, ವಿವರಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದರಿಂದ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News