ಗ್ರಾಮೀಣಾಭಿವೃದ್ಧಿಗೆ ಸುವರ್ಣ ವಿಧಾನಸೌಧದಲ್ಲಿ ವಿಶೇಷ ಕಚೇರಿ: ಕೆ.ಎಸ್.ಈಶ್ವರಪ್ಪ

Update: 2019-09-09 18:08 GMT

ಬೆಳಗಾವಿ, ಸೆ.9: ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅನುಕೂಲ ಆಗುವ ರೀತಿಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ಕಚೇರಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್.ಈಶ್ವರಪ್ಪತಿಳಿಸಿದ್ದಾರೆ.

ಸೋಮವಾರ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ನಡೆದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಚಿಂತನ-ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೀರು, ರಸ್ತೆ, ನೈರ್ಮಲ್ಯ, ಉದ್ಯೋಗ ಖಾತ್ರಿ ಸೇರಿದಂತೆ ಒಟ್ಟಾರೆ ಗ್ರಾಮೀಣಾಭಿ ವೃದ್ಧಿಗಾಗಿ ವಿಶೇಷ ಕಚೇರಿ ಸ್ಥಾಪಿಸಲಾಗುವುದು. ಈ ಕಚೇರಿಗೆ ಸಂಪೂರ್ಣ ಅಧಿಕಾರವನ್ನು ನೀಡಿ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ವಿಶೇಷ ಕಚೇರಿ ಆರಂಭಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸಿಕೊಂಡು ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸರಕಾರ ನಡೆಸುವ ದೈನಂದಿನ ಮಾದರಿಯ ಸಭೆ ಇದಲ್ಲ. ಗ್ರಾಮೀಣಾಭಿವೃದ್ಧಿ ಕುರಿತು ನಿಮ್ಮೆಲ್ಲರ ಚಿಂತನೆ ಹಾಗೂ ಅನುಭವಗಳನ್ನು ತಿಳಿದುಕೊಳ್ಳುವ ವಿಶೇಷ ಅವಕಾಶ ಇದು. ವಿದೇಶಕ್ಕೆ ಹೋಲಿಸಿದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಡಿಮೆ. ಸಂಸ್ಕೃತಿಯಲ್ಲಿ ನಾವು ಶ್ರೀಮಂತವಾಗಿದ್ದೇವೆ. ಆದರೆ, ಮೂಲ ಸೌಕರ್ಯಗಳು ಕಡಿಮೆಯಾಗಿವೆ. ರಾಜ್ಯದ ಅಭಿವೃದ್ಧಿಗೆ ಈ ಚಿಂತನ-ಮಂಥನ ಸಭೆ ಮಾದರಿಯಾಗಲಿ ಎಂದು ಈಶ್ವರಪ್ಪ ಆಶಯ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ಶಾಶ್ವತ ಪರಿಹಾರ: ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಹತ್ತು ಸಾವಿರ ರೂ.ಪರಿಹಾರ ನೀಡಲಾಗಿದೆ. ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರವಾಹ ಬಾಧಿತ ಸಂತ್ರಸ್ತರಿಗೆ ಉದಾರ ನೆರವು ನೀಡಿರುವುದು ಶ್ಲಾಘನೀಯ. ಮನೆಗಳ ಹಾನಿ ಸಮೀಕ್ಷೆ ಬಳಿಕ ಕೇಂದ್ರ ಸರಕಾರದ ನೆರವು ಪಡೆದುಕೊಂಡು ಶಾಶ್ವತ ಪರಿಹಾರ ನೀಡಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ರಾಜ್ಯದಲ್ಲಿ 609 ಕೆರೆಗಳು ಸೇರಿದಂತೆ 5612 ಗ್ರಾಮೀಣ ರಸ್ತೆಗಳು ಪ್ರವಾಹದಿಂದ ಹಾನಿಯಾಗಿವೆ. ಸಮೀಕ್ಷೆ ಕೈಗೊಂಡಿದ್ದು, ಕೇಂದ್ರ ಸರಕಾರದ ನೆರವಿನೊಂದಿಗೆ ರಸ್ತೆ ಮತ್ತು ಸಂಪರ್ಕ ಕಲ್ಪಿಸುವ ಕೆಲಸ ಶೀಘ್ರವಾಗಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಜಿಲ್ಲಾ ಪಂಚಾಯತ್ ಗಳ ಆದ್ಯತೆಯಾಗಿದೆ. ಪ್ರತಿ ಗ್ರಾಮಕ್ಕೆ ನೈರ್ಮಲ್ಯ ಕಾಪಾಡಲು ಪ್ರತಿ ಗ್ರಾಮಕ್ಕೆ ತಲಾ ಒಂದು ಲಕ್ಷ ರೂ. ನೀಡಲಾಗಿದೆ. ಮೂರು ಹಂತದ ವ್ಯವಸ್ಥೆ ಪಂಚಾಯತ್ ಬಲಪಡಿಸಲು ಸರಕಾರ ಬದ್ಧವಾಗಿದೆ. ಪಂಚಾಯತ್ ವ್ಯವಸ್ಥೆ ಇನ್ನಷ್ಟು ಬಲಪಡಿಸಲು ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಸರಕಾರ ಸಕಾರಾತ್ಮಕವಾಗಿ ಸ್ವೀಕರಿಸಲಿದೆ ಎಂದು ಅವರು ತಿಳಿಸಿದರು.

ಶೌಚಾಲಯ ನಿರ್ಮಿಸುವುದು ಸಾಧ್ಯವಾಗದಿದ್ದರೆ ನಾವೆಂತಹ ಜನಪ್ರತಿನಿಧಿಗಳು ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಕೇಂದ್ರ-ರಾಜ್ಯ ಸರಕಾರ ಬಿಡುಗಡೆ ಮಾಡುವ ಅನುದಾನದ ಸದ್ಬಳಕೆಗೆ ನಾವು ಇದುವರೆಗೆ ಯಶಸ್ವಿಯಾಗಿಲ್ಲ. ಅಧಿಕಾರ ಅಥವಾ ಅನುದಾನ ಕಡಿಮೆ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಶಾಸಕರು ಮತ್ತಿತರ ಜನಪ್ರತಿನಿಧಿಗಳ ಜತೆ ಸಮನ್ವಯದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕಿದೆ ಎಂದು ಅವರು ಹೇಳಿದರು.

6021 ಗ್ರಾಮ ಪಂಚಾಯತ್ ಗೆ ನೀಡುವ ಅನುದಾನದ ಹಂಚಿಕೆ ಕುರಿತ ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ, ಗ್ರಾಮೀಣಾಭಿವೃದ್ಧಿ ವಿಶೇಷ ಕಚೇರಿಯ ಸ್ಥಾಪನೆಯ ನಿರ್ಧಾರಕ್ಕಾಗಿ ಈಶ್ವರಪ್ಪಗೆ ಜನರ ಪರವಾಗಿ ಅಭಿನಂದನೆಗಳು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಲ್.ಕೆ.ಅತೀಕ್, ಉಮಾ ಮಹಾದೇವನ್, ನರೇಗಾ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೆಗೆ ಐವತ್ತು ಲಕ್ಷ ಕೋಟಿ ಅನುದಾನ

ಮುಂಬರುವ ಹತ್ತು ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಐವತ್ತು ಲಕ್ಷ ಕೋಟಿ ರೂ.ಒದಗಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅನುದಾನ ಹಂಚಿಕೆ ವ್ಯವಸ್ಥೆಗಳು ಕೇಂದ್ರೀಕರಣಗೊಂಡು ದಿಲ್ಲಿಯಿಂದ ಹಳ್ಳಿಗಳಿಗೆ ನೇರವಾಗಿ ಅನುದಾನ ಬಿಡುಗಡೆಗೊಳ್ಳಲಿದೆ. ಭವ್ಯ ಭಾರತ ಮತ್ತು ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು.

-ಸುರೇಶ್ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News