ಭಾರತಕ್ಕೆ ಖತರ್‌ನ ಕಠಿಣ ಸವಾಲು

Update: 2019-09-09 18:31 GMT

  ದೋಹಾ, ಸೆ.9: ಖತರ್‌ನಲ್ಲಿ 2022ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನ ‘ಈ’ ಗುಂಪಿನ ಅರ್ಹತಾ ಪಂದ್ಯದಲ್ಲಿ ಭಾರತಕ್ಕೆ ಸೋಮವಾರ ಆತಿಥೇಯ ಖತರ್‌ನ ಕಠಿಣ ಸವಾಲು ಎದುರಾಗಲಿದೆ.

ಒಮಾನ್ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಗುವಾಹಟಿಯಲ್ಲಿ ಸೆ.5ರಂದು ನಡೆದ ಪಂದ್ಯದಲ್ಲಿ ಭಾರತಕ್ಕೆ ಪ್ರಥಮಾರ್ಧದಲ್ಲಿ ಸುನೀಲ್ ಛೆಟ್ರಿ ದಾಖಲಿಸಿದ ಗೋಲು ನೆರವಿನಲ್ಲಿ ಆರಂಭಿಕ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದ ಕೊನೆಯ 8 ನಿಮಿಷಗಳಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟು ಒಮಾನ್ ವಿರುದ್ಧ ಸೋಲು ಅನುಭವಿಸಿತ್ತು. 24ನೇ ನಿಮಿಷದಲ್ಲಿ ಸುನೀಲ್ ಛೆಟ್ರಿ ಗೋಲು ದಾಖಲಿಸಿ ಭಾರತಕ್ಕೆ 1-0 ಮುನ್ನಡೆ ಸಾಧಿಸಲು ನೆರವಾಗಿದ್ದರು. ಇದು ಅವರ 72ನೇಯ ಅಂತರ್‌ರಾಷ್ಟ್ರೀಯ ಗೋಲು ಆಗಿದೆ. ಆದರೆ 82 ಮತ್ತು 90ನೇ ನಿಮಿಷದಲ್ಲಿ ಒಮಾನ್ ತಂಡದ ರಬಿಯಾ ಅಲಾವಿ ಅಲ್ ಮಂಧರ್ ಅವಳಿ ಗೋಲು ದಾಖಲಿಸಿ ಒಮಾನ್‌ಗೆ ಗೆಲುವು ತಂದುಕೊಟ್ಟರು.

ವಿಶ್ವ ಫುಟ್ಬಾಲ್ ರ್ಯಾಂಕಿಂಗ್‌ನಲ್ಲಿ 62ನೇ ಸ್ಥಾನದಲ್ಲಿರುವ ಖತರ್ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 6-0 ಅಂತರದಲ್ಲಿ ಭರ್ಜರಿ ಜಯ ದಾಖಲಿಸಿ ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ವಿರುದ್ಧ ಗೆಲುವಿಗೆ ನೋಡುತ್ತಿದೆ.

ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡಿರುವ ಖತರ್‌ನ ಫುಟ್ಬಾಲ್ ತಂಡ ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್‌ನಲ್ಲಿ ಗಮನಾರ್ಹ ಸುಧಾರಣೆ ಮಾಡಿದೆ. ಈ ವರ್ಷದ ಆರಂಭದಲ್ಲಿ ಯುಎಇಯಲ್ಲಿ ನಡೆದ ಏಶ್ಯನ್ ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಖತರ್ ಪ್ರಶಸ್ತಿ ಜಯಿಸಿತ್ತು. ಭಾರತದ ಫುಟ್ಬಾಲ್ ತಂಡ ಕೂಡಾ ಸುಧಾರಣೆಯ ಹಾದಿಯಲ್ಲಿದೆ. ಖತರ್ ಐತಿಹಾಸಿಕವಾಗಿ ಬಲಿಷ್ಠ ತಂಡ. ಭಾರತದ ವಿರುದ್ಧ ಆಡಿರುವ 4 ಪಂದ್ಯಗಳ ಪೈಕಿ 3ರಲ್ಲಿ ಜಯ ಗಳಿಸಿದೆ. 1 ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿದೆ.

ಉಭಯ ತಂಡಗಳು 2007ರಲ್ಲಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಇದರಲ್ಲಿ ಭಾರತದ ವಿರುದ್ಧ ಖತರ್ 6-0 ಅಂತರದಲ್ಲಿ ಜಯ ಸಾಧಿಸಿತ್ತು. 2011ರಲ್ಲಿ ದೋಹಾದಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಖತರ್‌ಗೆ ಭಾರತ 2-1 ಅಂತರದಲ್ಲಿ ಸೋಲುಣಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News