ಮಂಡ್ಯ: ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2019-09-09 18:38 GMT

ಮಂಡ್ಯ, ಸೆ.9: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಈಡಿ ಅಧಿಕಾರಿಗಳು ಬಂಧಿಸಿರುವ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗು ಅಭಿಮಾನಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕೇಂದ್ರದ ಬಿಜೆಪಿ ಸರಕಾರ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಈಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಶಿವಕುಮಾರ್ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಕೇಂದ್ರದ ಬಿಜೆಪಿ ಸರಕಾರ ದ್ವೇಷದ ರಾಜಕಾರಣ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಈಡಿ, ಸಿಬಿಐ, ಇತರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಅವರು ಈಡಿ ವಿಚಾರಣೆಗೆ ಸಹಕಾರ ನೀಡಿದ್ದಾರೆ. ಆದರೆ, ತನಿಖೆಗೆ ಸಹಕರಿಸುತ್ತಿಲ್ಲವೆಂಬ ಸಲ್ಲದ ಆರೋಪ ಮಾಡಿ ಬಂಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಳಿಯುವ ಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.

ದೇಶದ ಹಲವೆಡೆ ನೆರೆಯಿಂದ ಸಾವಿರಾರು ಜನರು ಸಂತ್ರಸ್ತರಾಗಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹೀನಾಯ ಪರಿಸ್ಥಿತಿ ತಲುಪಿದೆ. ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಮರೆ ಮಾಚಲು ವಿಪಕ್ಷ ನಾಯಕರ ಬಂಧನ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಸರಕಾರದ ಕಾರ್ಯವೈಖರಿಯನ್ನು ಜನತೆ ಗಮನಿಸುತ್ತಿದ್ದು, ಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಅನ್ಯಾಯವಾಗುವುದನ್ನು ನಾವು ನೋಡಿಕೊಂಡು ಕುಳಿತುಕೊಳ್ಳುವುದಿಲ್ಲ. ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಅವರು ಘೋಷಿಸಿದರು.
ಮುಖಂಡ ಗಣಿಗ ರವಿಕುಮಾರ್, ಮಾಜಿ ಶಾಸಕರಾದ ಎಚ್.ಬಿ.ರಾಮು, ಎಂ.ಎಸ್.ಆತ್ಮಾನಂದ, ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್,  ವಿವಿಧ ಘಟಕಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು, ಮುಖಂಡರು, ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News