ಕೋಲಾರ: ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ ಆರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತ್ಯು

Update: 2019-09-10 13:59 GMT

ಕೋಲಾರ, ಸೆ.10: ಕುಂಟೆಯೊಂದರ ಬಳಿ ಆಟವಾಡುತ್ತಾ ಗಣೇಶನನ್ನು ನೀರಿಗೆ ಬಿಡಲು ಹೋದ ಆರು ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಕೋಲಾರದಲ್ಲಿಂದು ನಡೆದಿದೆ.

ಮೃತ ಮಕ್ಕಳನ್ನು ತೇಜಸ್ವಿ(11), ವೈಷ್ಣವಿ (11) ವೀಣಾ(10), ರಕ್ಷಿತಾ (08) ಧನಷ್ (7) ರೋಹಿತ್ (8) ಎಂದು ಗುರುತಿಸಲಾಗಿದೆ.

ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದಲ್ಲಿಂದು ಸಂಜೆ 4:30 ರ ಸುಮಾರಿಗೆ ಘಟನೆ ನಡೆದಿದ್ದು, ಕುಂಟೆ ಬಳಿ ಇದ್ದ ಜೇಡಿ ಮಣ್ಣಿನಿಂದ ಗಣೇಶ ತಯಾರು ಮಾಡಿ, ಬಳಿಕ ಗಣೇಶನನ್ನು ನೀರಿನಲ್ಲಿ ಬಿಡಲು ಹೋದ ಸಂದರ್ಭ ನಾಲ್ವರು ಬಾಲಕಿಯರು ಸೇರಿ ಒಟ್ಟು 6 ಮಕ್ಕಳು ಜಲಸಮಾಧಿಯಾಗಿದ್ದಾರೆ. 

ಮೊಹರಂ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಗ್ರಾಮದ ಬಳಿಯ ಕೆರೆಯಲ್ಲಿ ಮಕ್ಕಳು ಆಟವಾಡಲು ತೆರಳಿದ್ದು, ಈ ವೇಳೆ ಮಣ್ಣಿನಿಂದ ತಾವೇ ತಯಾರಿಸಿದ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲು ಹೋಗಿದ್ದಾರೆ. ಈ ಸಂದರ್ಭ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 

ಅಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿದ್ದು, ಮಕ್ಕಳ ಮೃತದೇಹಗಳನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News