ಭೂಕುಸಿತಕ್ಕೆ ಮಾನವ ಹಸ್ತಕ್ಷೇಪ, ಅವೈಜ್ಞಾನಿಕ ಕಾಮಗಾರಿ ಕಾರಣ: ಭೂ ವಿಜ್ಞಾನಿಗಳ ಅಭಿಪ್ರಾಯ

Update: 2019-09-10 17:44 GMT

ಮಡಿಕೇರಿ, ಸೆ.10: ಕೊಡಗು ಜಿಲ್ಲೆಯ ವಿವಿಧೆಡೆ ಈ ಬಾರಿಯ ಮಳೆಗಾಲದಲ್ಲಿ ಉಂಟಾಗಿರುವ ಭೂಕುಸಿತಕ್ಕೆ ಮಾನವ ಹಸ್ತಕ್ಷೇಪ ಹಾಗೂ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂದು ಭೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಭಾಗಮಂಡಲ ಸಮೀಪದ ಕೋರಂಗಾಲ, ವೀರಾಜಪೇಟೆ ಸಮೀಪದ ತೋರಾ ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿ 15 ಮಂದಿ ಭೂ ಸಮಾಧಿಯಾಗಿದ್ದರೆ, ವೀರಾಜಪೇಟೆಯ ಮಲೆತಿರಿಕೆ ಬೆಟ್ಟ ಹಾಗೂ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಗಳಲ್ಲಿ ಭಾರೀ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಭೂ ಸರ್ವೇಕ್ಷಣಾ ಇಲಾಖೆ ವತಿಯಿಂದ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.

ಅದರಂತೆ ಜಿಲ್ಲೆಗೆ ಆಗಮಿಸಿದ ಇಲಾಖೆಯ ಭೂ ವಿಜ್ಞಾನಿಗಳಾದ ಸುನಂದನ್ ಬಸು ಮತ್ತು ಕಪಿಲ್‍ಸಿಂಗ್ ಅವರುಗಳು ಜಿಲ್ಲೆಯ ಪ್ರಾಕೃತಿಕ ದುರಂತಗಳಿಗೆ ಕಾರಣವಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಇದೀಗ 27 ಪುಟಗಳ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ವರದಿಯಲ್ಲಿ ಪ್ರಮುಖವಾಗಿ ಭೂಕುಸಿತ ಮತ್ತು ಭೂಮಿಯಲ್ಲಿನ ಬಿರುಕಿಗೆ ಮಾನವ ಹಸ್ತಕ್ಷೇಪವೇ ಕಾರಣ ಎಂಬುದನ್ನು ಉಲ್ಲೇಖಿಸಲಾಗಿದೆ. ಅದರಲ್ಲೂ ಅರಣ್ಯ ಇಲಾಖೆಯ ಅವೈಜ್ಞಾನಿಕ ಇಂಗುಗುಂಡಿ ನಿರ್ಮಾಣ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಬಿರುಕಿಗೆ ಕಾರಣ ಎಂದು ಬೊಟ್ಟು ಮಾಡಲಾಗಿದ್ದು, ವೀರಾಜಪೇಟೆಯ ತೋರ ಗ್ರಾಮದಲ್ಲಿ ಭೂಕುಸಿತಕ್ಕೆ ಅಲ್ಲಿನ ಕಲ್ಲುಗಣಿಕಾರಿಕೆ, ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಬಿರುಕಿಗೆ ಬೆಟ್ಟದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಮನೆಗಳು ಕಾರಣ ಎಂದು ಗುರುತಿಸಲಾಗಿದೆ.

ಅರಣ್ಯ ಇಲಾಖೆಯು ಇಂಗು ಗುಂಡಿಗಳನ್ನು ನಿರ್ಮಿಸುವಾಗ ಕಂದಕದ ರೀತಿಯಲ್ಲಿ ಭೂಮಿಯನ್ನು ಕೊರೆದು ಮಳೆ ನೀರು ಸರಾಗವಾಗಿ ಹರಿಯುವುದಕ್ಕೆ ತಡೆಯುಂಟು ಮಾಡಿರುವುದರಿಂದ ಆ ನೀರು ಭೂಮಿಯೊಳಗೆ ಅತಿಯಾಗಿ ಇಂಗಿ ಬಿರುಕು ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದ್ದರೆ, ರಸ್ತೆ ವಿಸ್ತರಣೆ ಸಂದರ್ಭ ಇಳಿಜಾರನ್ನು ಸಮತಟ್ಟುಗೊಳಿಸುವ ಸಂದರ್ಭವೂ ಬೆಟ್ಟಕ್ಕೆ ಧಕ್ಕೆಯಾಗಿರುವುದು ಬಿರುಕಿಗೆ ಕಾರಣ ಎಂದು ಹೇಳಲಾಗಿದೆ.

ಕೋರಂಗಾಗಲ ಗ್ರಾಮದಲ್ಲಿನ ಭೂಕುಸಿತಕ್ಕೆ ಅಲ್ಲಿ ಮನೆಗಳನ್ನು ನಿರ್ಮಿಸುವ ಸಂದರ್ಭ ಇಳಿಜಾರು ಪ್ರದೇಶವನ್ನು ಸಮತಟ್ಟು ಮಾಡಿರುವುದು ಕಾರಣವೆಂದು ಬೊಟ್ಟು ಮಾಡಲಾಗಿದ್ದು, ಇಂತಹ ತೀರಾ ಇಳಿಜಾರು ಪ್ರದೇಶದಲ್ಲಿ ಭೂಮಿಯನ್ನು ಗಟ್ಟಿಗೊಳಿಸಬಲ್ಲ ಸಸ್ಯಗಳನ್ನು ಸಮೃದ್ಧವಾಗಿ ಬೆಳೆಸಬೇಕು ಎಂದು ಸಲಹೆ ಮಾಡಲಾಗಿದೆ.

ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ಮನೆಗಳ ನಿರ್ಮಾಣದ ಸಂದರ್ಭ ಯಾವುದೇ ತಡೆಗಳನ್ನು ನಿರ್ಮಿಸದೆ ಯದ್ವಾತದ್ವಾ ಮನೆಗಳನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಬೆಟ್ಟದಲ್ಲಿ ಬಿರುಕು ಮತ್ತು ಕುಸಿತ ಸಂಭವಿಸಿದೆ. ಈ ಬೆಟ್ಟದಲ್ಲಿ ಬಿರುಕುಗಳನ್ನು ಅಗತ್ಯ ಸಾಮಾಗ್ರಿಗಳನ್ನು ಬಳಸಿ ಮುಚ್ಚಬೇಕಾಗಿದ್ದು, ಇದರಿಂದ ಆ ಸ್ಥಳದ ತೇವಾಂಶ ಕಡಿಮೆಯಾಗಲಿದೆ. ಕೆಲವು ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಿ ನೀರಿನ ಸರಾಗ ಸಂಚಾರಕ್ಕೆ ದಾರಿ ಮಾಡಿಕೊಡಬೇಕಿದೆ. ಪ್ರಸಕ್ತ ವರ್ಷದ ಮಳೆಗಾಲ ಮುಗಿಯುವ ವರೆಗೂ ಆ ಪ್ರದೇಶದ ಕೆಲವು ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತೋರ ಗ್ರಾಮದಲ್ಲಿ 6 ಮಂದಿ ಸಾವಿಗೀಡಾಗಿ ನಾಲ್ವರು ಇನ್ನೂ ಕಣ್ಮರೆಯಾಗಿರುವ ಪ್ರಕರಣವನ್ನು ಅಲೋಕಿಸಿರು ವಿಜ್ಞಾನಿಗಳು, ದುರಂತ ಪ್ರದೇಶದ ಮುಂಭಾಗದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಈ ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಬೊಟ್ಟು ಮಾಡಿದ್ದಾರೆ. ಗಣಿಗಾರಿಕೆ ಪ್ರದೇಶದಲ್ಲಿ ಕಲ್ಲುಗಳನ್ನು ಸ್ಫೋಟಿಸುವಾಗ ಭೂ ಪದರದಲ್ಲಿ ಉಂಟಾದ ವ್ಯತ್ಯಾಸವೇ ಭೂ ಕುಸಿತಕ್ಕೆ ಕಾರಣವಾಗಿದ್ದು, ರಸ್ತೆ ನಿರ್ಮಾಣದ ಸಂದರ್ಭ ಭೂಮಿಯ ಇಳಿಜಾರು ಪ್ರದೇಶದಲ್ಲಿ ವ್ಯತ್ಯಾಸವಾಗಿ ನೀರು ಭೂಮಿಯೊಳಗೆ ಇಳಿದಿರುವುದು ಕೂಡಾ ಕುಸಿತಕ್ಕೆ ಕಾರಣ ಎಂದು ತಿಳಿಸಲಾಗಿದೆ.

ಭೂಮಿಯ ಇಳಿಜಾರು ಪ್ರದೇಶ ವ್ಯತ್ಯಾಸವಾಗಿರುವ ತೋರ, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಗಳಲ್ಲಿ ‘ಸ್ಲೋಪ್‍ ಗ್ರೇಡಿಂಗ್, ತಡೆಗೋಡೆಗಳ ನಿರ್ಮಾಣ, ನೀರು ಹರಿಯಲು ಸೂಕ್ತ ದಾರಿ ನಿರ್ಮಾಣ, ಸಸ್ಯಗಳ ನೆಡುವಿಕೆ ಅಗತ್ಯವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದ್ದು, ತೋರ ಹಾಗೂ ಅಯ್ಯಪ್ಪ ಬೆಟ್ಟದ ವಿಸ್ತೃತ ಅಧ್ಯಯನಕ್ಕೆ ಮತ್ತಷ್ಟು ಕಾಲಾವಕಾಶ ಬೇಕು ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಬೆಟ್ಟಗಳ ಬಿರುಕು ಹಾಗು ಕುಸಿತಕ್ಕೆ ಮಾನವ ಹಸ್ತಕ್ಷೇಪ ಹಾಗೂ ಅವೈಜ್ಞಾನಿಕ ಕಾಮಗಾರಿಗಳು ಕಾರಣ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಮನೆಗಳ ನಿರ್ಮಾಣದ ಸಂದರ್ಭ ಸ್ಥಳೀಯ ಆಡಳಿತಗಳು ಸ್ಥಳ ಪರಿಶೀಲಿಸದೆ ಅನುಮತಿ ನೀಡಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಎರಡು ಮಾತಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News