ಕಥೆ ಹೇಳುವ ಪರಿಸರ

Update: 2019-09-10 18:30 GMT

ಪರಿಸರ ವ್ಯವಸ್ಥೆಯಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ, ಪ್ರಾಣಿ ಮರಗಿಡಗಳ ಸಂಬಂಧವನ್ನು ತಿಳಿಸಿ, ಚಿರತೆ ಹುಲಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಗುರುತಿಸುವ ಬಗ್ಗೆ ನಿರೂಪಿಸಿ, ಕಲೆ ಸಂಸ್ಕೃತಿಯಲ್ಲಿ ವನ್ಯ ಜೀವಿಗಳ ಪ್ರಭಾವವನ್ನು ಕಾಣಿಸಿ, ಮಾನವ -ವನ್ಯಜೀವಿಗಳ ಸಂಬಂಧದ ಕೊಂಡಿಯನ್ನು ಕೂಡಿಸಿ ಬರೆದಿರುವ ಪುಸ್ತಕವೇ ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’. ಈ ಪುಸ್ತಕದ ನಾಯಕರು ಹುಲಿ, ಚಿರತೆ, ಆನೆ, ಕಾಟಿ, ತರಕರಡಿ, ಬೂರಗ, ಉರುಗಲು, ಹಾಲುವಾಣ ಮರಗಳು, ಅರಣ್ಯ ಕಾಯುವ ಸಿಬ್ಬಂದಿ, ಬಿಳಿಗಿರಿರಂಗನ ಬೆಟ್ಟ, ಬುಕ್ಮಾ ಪಟ್ಟಣ, ನಾಗರಹೊಳೆಯ ಕಾಡುಗಳು ಇತ್ಯಾದಿ. ಸಾಹಿತ್ಯವೂ, ವನ್ಯಜೀವಿ ವಿಜ್ಞಾನವೂ ಸಮಕೈಯಾಗಿ ಸಾಗುವ ಪ್ರಕರಣಗಳೊಂದಿಗೆ ಪುಸ್ತಕದಲ್ಲಿ ವಿವರಿಸಿದ್ದಾರೆ ದೇಶದ ಖ್ಯಾತ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಕರಾದ ಸಂಜಯ್ ಗುಬ್ಬಿಯವರು. ಇದು, ಇವರ ಎರಡನೇ ಕನ್ನಡ ಪುಸ್ತಕ. ಇತ್ತೀಚೆಗೆ ಬಿಡುಗಡೆಯಾದ ಆಂಗ್ಲಭಾಷೆಯ ‘ಸೆಕೆಂಡ್ ನೇಚರ್: ಸೇವಿಂಗ್ ಟೈಗರ್ ಲ್ಯಾಂಡ್ ಸ್ಕೇಪ್ಸ್ ಇನ್ ದಿ ಟ್ವೆಂಟಿ-ಫಸ್ಟ್ ಸೆಂಚುರಿ’ ಸಾಕಷ್ಟು ಜನಪ್ರಿಯತೆಯನ್ನು ಕಂಡ ಅವರ ಮೊದಲ ಆಂಗ್ಲ ಪುಸ್ತಕ.

ಇಲ್ಲಿ ಒಟ್ಟು 24 ಕಥನ ಬರಹಗಳಿವೆ. ಇದು ಲೇಖಕರ ಅನುಭವ ಕಥನವೂ ಹೌದು. ಇಂತಹ ಕಥನಗಳಿಗೆ ಕನ್ನಡದಲ್ಲಿ ಪೂರ್ಣ ಚಂದ್ರ ತೇಜಸ್ವಿಯವರು ಜನಪ್ರಿಯರಾಗಿದ್ದರು. ಪರಿಸರದ ಕತೆಗಳನ್ನು ಒಣ ಭಾಷೆಯಲ್ಲಿ ನಿರೂಪಿಸದೆ, ಲವಲವಿಕೆಯಿಂದ ಬರೆಯುತ್ತಾ ಓದುಗರಲ್ಲಿ ಪರಿಸರದ ಪ್ರಾಣಿ ಪಕ್ಷಿಗಳ ಕುರಿತಂತೆ ಕುತೂಹಲವನ್ನು ಹುಟ್ಟಿಸುತ್ತಿದ್ದರು. ಇಲ್ಲಿ ಬರುವ ಇಬ್ಬನಿಯ ಹುಲಿ, ಆನೆಯ ವಾತ್ಸಲ್ಯ, ಕಾಟಿಯ ಜಂಬ ಮುರಿದ ಆನೆ, ಶಾಲೆಗೆ ಬಂದ ಚಿರತೆ, ಪಿಂಕಿಯ ವ್ಯಥೆಯ ಕಥೆ, ಈಚಲು ಮರದ ಗೀಜಗ ಪಕ್ಷಿಗಳು ಮತ್ತು ಅಡಿಕೆ ತೋಟದ ಏಡಿಗಳು ಆ ದಾಟಿಯ ಬರಹಗಳು. ನಮ್ಮ ಪರಿಸರವನ್ನು ನಾವು ಕುತೂಹಲದ ಕಣ್ಣಿನಲ್ಲಿ ನೋಡುವುದಕ್ಕೆ ಈ ಬರಹಗಳು ಕಲಿಸುತ್ತವೆ. ಸಾಧಾರಣವಾಗಿ ನಾವು ಪ್ರಾಣಿ ಪಕ್ಷಿಗಳನ್ನು ಮನುಷ್ಯ ಬದುಕಿನೊಂದಿಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ಅಪರಿಚಿತ ಜಗತ್ತಿನ ಜೀವಗಳಾಗಿ ನೋಡುತ್ತೇವೆ. ಆದರೆ ಇಲ್ಲಿ, ಮನುಷ್ಯರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಪರಿಸರವನ್ನು ಲೇಖಕರು ಕಟ್ಟಿಕೊಡುತ್ತಾರೆ. ಹಾಗೆಯೇ ವನ್ಯ ಜೀವಿ ವಿಜ್ಞಾನ ಎನ್ನುವುದು ನಾಲ್ಕು ಗೋಡೆಗಳಲ್ಲಿ ಕಲಿಯುವಂತಹದಲ್ಲ. ಅಪಾರ ಧೈರ್ಯವನ್ನು ಅದು ಬೇಡುತ್ತದೆ. ಜೊತೆಗೆ ಸೂಕ್ಷ್ಮತೆಯನ್ನು ಕೂಡ. ಇದೇ ಸಂದರ್ಭದಲ್ಲಿ ಈ ವಿಜ್ಞಾನವನ್ನು ಸುತ್ತಿಕೊಂಡ ರಾಜಕೀಯಗಳನ್ನೂ ಅವರು ಪರಿಚಯಿಸುತ್ತಾರೆ. ಅಪಾರ ತಾಳ್ಮೆಯೊಂದಿಗೆ ಎಲ್ಲ ಸವಾಲುಗಳನ್ನು ಎದುರಿಸುತ್ತಾ ಮುಂದುವರಿಯಬೇಕಾದ ಅಗತ್ಯವನ್ನು ಈ ಕೃತಿ ಹೇಳುತ್ತದೆ. ಹಾಗೆಯೇ ಪ್ರಾಣಿ, ಕೀಟಗಳ ಜೊತೆಗಿನ ಆಟ, ಪ್ರಯೋಗ ಅವುಗಳಿಗೆ ಹಿಂಸೆಯಾಗಿ ಪರಿವರ್ತನೆಯಾಗಬಾರದು ಎನ್ನುವ ಎಚ್ಚರಿಕೆಯನ್ನೂ ಈ ಕೃತಿ ನೀಡುತ್ತದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಪೋಷಕರಿಗೂ ಇದೊಂದು ಅಮೂಲ್ಯ ಕೃತಿಯಾಗಿದೆ. ನಮ್ಮ ಬಾಲ್ಯವನ್ನು ರಮ್ಯವಾಗಿಸಿದ ಹಲವು ಜೀವಿಗಳು ಇಲ್ಲಿ ಮತ್ತೆ ನಮ್ಮ ಪಾಲಿಗೆ ನೆನಪಾಗಿ ಕಾಡುತ್ತವೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 200. ಮುಖಬೆಲೆ 200 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News