ಕಾಫಿಬೋರ್ಡ್ ಅಧಿಕಾರಿಗಳಿಂದ ಅನ್ಯಾಯ: ಕಾಫಿ ಬೆಳೆಗಾರ ಆರೋಪ

Update: 2019-09-11 12:15 GMT

ಮೂಡಿಗೆರೆ, ಸೆ.12: ಕಾಫಿಬೋರ್ಡ್ ಅಧಿಕಾರಿಗಳು ಪ್ರಕೃತಿ ವಿಕೋಪದ ನೈಜ ವರದಿಯನ್ನು ಸರಕಾರಕ್ಕೆ ಸಲ್ಲಿಸದೇ ಬೆಳೆಗಾರರಿಗೆ ವಂಚನೆ ಮಾಡುತ್ತಿದ್ದಾರೆ. ಕಾಫಿ ಮಂಡಳಿ ಅಧ್ಯಕ್ಷರು ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕೆಂದು ಕಾಫಿ ಬೆಳೆಗಾರ ವಿ.ಕೆ.ಚಂದ್ರೇಗೌಡ ವಾಲೆಕರಟ್ಟೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ವಾಲೆಕರಟ್ಟೆ ಗ್ರಾಮದಲ್ಲಿರುವ ನನ್ನ ಕಾಫಿ ತೋಟವು ಕಸಬಾ ಹೋಬಳಿಯ ಹೆಸಗಲ್ ಗ್ರಾಮದಲ್ಲಿದ್ದು, 1 ಹೆಕ್ಟೇರಿನಷ್ಟು ತೋಟ ನಾಶವಾಗಿದೆ. ಆದರೆ ಕಾಫಿ ಮಂಡಳಿ ಕೂಗಳತೆಯಲ್ಲಿದ್ದರೂ ಇದುವರೆಗೂ ಭೇಟಿ ನೀಡಿಲ್ಲ. ಅಲ್ಲದೇ ಹೋಬಳಿಯಲ್ಲಿ ಅನೇಕ ಸಣ್ಣ ಬೆಳೆಗಾರರು ಕಳೆದ ತಿಂಗಳ ಭಾರೀ ಮಳೆಗೆ ತೋಟಗಳನ್ನು ಕಳೆದುಕೊಂಡಿದ್ದಾರೆ. ತಾಲೂಕಿನ ಸಾಕಷ್ಟು ಕಡೆ ಗುಡ್ಡ ಮತ್ತು ಧರೆ ಕುಸಿದಿದ್ದು, ಕಾಫಿ ಗಿಡಗಳೇ ನಾಶವಾಗಿವೆ. ಇದರಿಂದಾಗಿ ಬೆಳೆಗಾರರ ಭವಿಷ್ಯದ ಬದುಕು ಸಂಕಷ್ಟಕ್ಕೆ ಒಳಗಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿನ ಕಾಫಿ ಬೋರ್ಡ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸರಕಾರಕ್ಕೆ ನೈಜ ವರದಿ ಸಲ್ಲಿಸಿ ಎಂದು ತಿಳಿಸಲು ಕಚೇರಿಗೆ ತೆರಳಿದರೆ, ಮೂಡಿಗೆರೆ ಕಸಬಾ ಹೋಬಳಿಯಲ್ಲಿ ಯಾವುದೆ ಹಾನಿಯಾಗಿಲ್ಲ, ಇಲ್ಲಿಗೆ ಬರಬೇಡಿ ಸಂಬಾರ ಮಂಡಳಿಗೆ ಹೋಗಿ ಹೇಳಿ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ. ಅಲ್ಲದೆ ನಮ್ಮಲ್ಲಿ ಯಾವುದೆ ಹಾನಿಯಾಗಿಲ್ಲ ಎಂದು ಸರಕಾರಕ್ಕೆ ವರದಿ ನೀಡಿದ್ದಾರೆ. ಕಾಫಿ ಮಂಡಳಿ ತೋಟದ ಪಕ್ಕವೆ ನಮ್ಮ ತೋಟವಿದ್ದು, ಇಲ್ಲಿಗೆ ಭೇಟಿ ನೀಡಲಾಗದವರು ತಾಲೂಕಿನ ಇನ್ನುಳಿದ ಪ್ರದೇಶಗಳ ಮಾಹಿತಿ ಸಲ್ಲಿಸುತಾರೆ ಎಂಬುದು ಹಾಸ್ಯಾಸ್ಪದವಾಗಿದೆ. ಬೋರ್ಡಿನ ಅಧಿಕಾರಿಗಳು ಸರಕಾರದಿಂದ ಬರುವ ಅನುದಾವನ್ನು ಹೇಗೆ ದುರುಪಯೋಗಪಡಿಸಿಕೊಂಡು ಕೊಳ್ಳೆ ಹೊಡೆಯಬಹುದೆಂಬ ಬಗ್ಗೆ ಮಾತ್ರ ಗಮನ ಕೊಡುತ್ತಿದ್ದು, ಅತಿವೃಷ್ಟಿ ಹಾನಿ ಸಂಬಂಧ ಸರಕಾರಕ್ಕೆ ನೈಜ ವರದಿ ನೀಡಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಸಮಯದಲ್ಲಿ ಕಸಬಾ ಹೋಬಳಿಯನ್ನು ಪಕೃತಿ ವಿಕೋಪಕ್ಕೆ ಸೇರಿಸದಿರುವುದು ರೈತರ ಬದುಕಿನ ಹಾನಿಗೆ ಕಾರಣವಾಗಲಿದೆ. ಕಾಫಿ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಕೂಡಲೇ ಈ ಸಂಬಂಧ ಅಗತ್ಯ ಕ್ರಮವಹಿಸಿ, ಹಾನಿಗೊಳಗಾದ ಎಲ್ಲ ಕಾಫಿ ತೋಟಗಳಲ್ಲಿನ ವಾಸ್ತವಾಂಶವನ್ನು ಸರಕಾರಕ್ಕೆ ವರದಿ ಮಾಡಬೇಕು ಎಂದು ಹೇಳಿಕೆಯಲ್ಲಿ ಚಂದ್ರೇಗೌಡ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News