ಬೌದ್ಧ, ಸಿಖ್ ಧರ್ಮಗಳಿಗೆ ಇರುವ ಮಾನ್ಯತೆ ಲಿಂಗಾಯತ ಧರ್ಮಕ್ಕೆ ಯಾಕೆ ಇಲ್ಲ ?

Update: 2019-09-11 17:27 GMT

ಪೂಜ್ಯ ಪೇಜಾವರ ಶ್ರೀಗಳು ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ಲಿಂಗಾಯತ ಹೋರಾಟಕ್ಕೆ ಸಂಬಂಧಪಟ್ಟ ನಾಲ್ಕು ಮುಖ್ಯ ಅಂಶಗಳಿಗೆ ತಮ್ಮ ಸ್ಪಷ್ಟ ನಿಲುವುಗಳನ್ನು ತಿಳಿಸಿದ್ದಾರೆ. ಮೊದಲನೆಯದು, "ಹಿಂದೂ ಎಂಬುದು ಧರ್ಮ ವಾಚಕವಲ್ಲ, ಹಿಂದೂ ಎಂಬ ಶಬ್ಧವು ದೇಶವಾಚಕವಾಗಿದೆ" ಅದನ್ನು ನಾವು ಒಪ್ಪುತ್ತೇವೆ. ಎರಡನೆಯದು, "ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಬಸವ, ಬುದ್ಧ, ನಾನಕ, ಮಹಾವೀರ, ಇವರೆಲ್ಲರೂ ಹಿಂದೂ ದೇಶದಲ್ಲಿ ಹುಟ್ಟಿದ ಪ್ರವಾದಿಗಳು. ಇವರು ಸ್ಥಾಪಿಸಿದ ಧರ್ಮಗಳೆಲ್ಲವೂ ಹಿಂದೂ ಧರ್ಮವೇ ಆಗುತ್ತದೆ". ದೇಶವಾಚಕವೆಂಬ ಅರ್ಥದಲ್ಲಿ, ನಾವು ಈ ಮಾತನ್ನು ಒಪ್ಪುತ್ತೇವೆ. ಮೂರನೆಯದಾಗಿ, ‘‘ಹಿಂದೂ ಧರ್ಮದಲ್ಲಾದ ಕ್ರಾಂತಿಯ ಪರಿಣಾಮವಾಗಿ ಲಿಂಗಾಯತ ಧರ್ಮ ಹುಟ್ಟಿದೆ ಮತ್ತು ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕೆ ಸೇರಿದ್ದರೂ ಅನೇಕ ಜಾತಿಗಳನ್ನೊಳಗೊಂಡ ಸ್ವತಂತ್ರ ಧರ್ಮವೆಂಬುದನ್ನು ಒಪ್ಪಿಕೊಳ್ಳುತ್ತೇನೆ". ಇದೇ ಮಾತನ್ನು ಪೇಜಾವರ ಶ್ರೀಗಳು 2017 ರಲ್ಲಿ ಹೇಳಿದ್ದರೆ ಈವರೆಗೆ ಆದ ಅಧ್ವಾನಗಳನ್ನು ತಪ್ಪಿಸಬಹುದಿತ್ತು. ಕೊನೆಯದಾಗಿ "ನಾವೆಲ್ಲಾ ಸಂಘಟಿತರಾದರೆ ನಮ್ಮ ಧರ್ಮ ಸಂಸ್ಕ್ರತಿ, ಭಾಷೆ ಇವೆಲ್ಲವೂ ಉಳಿಯುತ್ತದೆ. ಅಂತೂ ನಾವೆಲ್ಲರೂ ನಮ್ಮ ಧರ್ಮದ ಬಗ್ಗೆ ಅಭಿಮಾನವನ್ನು ಇಟ್ಟುಕೊಂಡು (ದೇಶವಾಚಕ ಅರ್ಥದಲ್ಲಿ) ಹಿಂದೂ ಧರ್ಮದ ನೆಲೆಯಲ್ಲಿ ಸಂಘಟಿತರಾಗೋಣ" ಈ ನಾಲ್ಕು ಅಂಶಗಳನ್ನು ಇಷ್ಟೊಂದು ನೇರವಾಗಿ ಸ್ಪಷ್ಟಪಡಿಸಿದ್ದಕ್ಕಾಗಿ ಅವರಿಗೆ ಈ ಮೂಲಕ ಧನ್ಯವಾದಗಳನ್ನು ಮತ್ತು ಅಭಿನಂದನೆಗಳನ್ನು ತಿಳಿಸುತ್ತೇನೆ.

ಪೇಜಾವರ ಶ್ರೀಗಳ ಇಲ್ಲಿನ ಕೆಲವು ಹೇಳಿಕೆಗಳು ಹೊಸ ವಿವಾದಗಳನ್ನು ಸೃಷ್ಟಿಸಿವೆ. ಅವುಗಳಲ್ಲಿ ಮೊದನೆಯದ್ದು ‘‘ವೈದಿಕ ಧರ್ಮವೇ ಹಿಂದೂ ಧರ್ಮವೆಂಬುವುದಕ್ಕೆ ಯಾವ ಆಧಾರವೂ ಇಲ್ಲ’’. ಹಾಗಾದರೆ ನಾಲ್ಕು ವೇದಗಳು, 150ರಷ್ಟು ಉಪನಿಷತ್ತುಗಳು, 18 ಶಾಸ್ತ್ರಗಳು, 18 ಪುರಾಣಗಳು, 64 ವಿದ್ಯೆಗಳು, 285 ಆಗಮ ಉಪಾಗಮಗಳ ಗತಿಯೇನು ? ಜೈನ, ಬೌದ್ಧ, ಸಿಖ್ ಮತ್ತು ಲಿಂಗಾಯತ ಧರ್ಮಗಳ ಕ್ರಾಂತಿಗಳಿಗೆ ಕಾರಣ ಯಾವುದು? ಇದು ತುಂಬಾ ಗಹನವಾದ ವಿಷಯ. ಈ ಸಮಸ್ಯೆಯನ್ನು ಪ್ರಕಾಂಡ ಪಂಡಿತರಾದ ಬ್ರಾಹ್ಮಣ ವಿದ್ವಾಂಸರಿಗೆ ಬಿಟ್ಟು ಬಿಡುತ್ತೇವೆ.

ಅಲ್ಲದೆ, ‘‘ಜೈನ, ಬೌದ್ಧ, ಸಿಖ್ ಧರ್ಮಗಳು ಪ್ರತ್ಯೇಕ ಧರ್ಮಗಳು ಯಾವಾಗ ಆಗಿದ್ದವೆಂದು ನನಗೆ ಗೊತ್ತಿಲ್ಲ. ಬ್ರಿಟಿಷರ ಕಾಲದಲ್ಲಿ ಅವರು ಒಡೆದು ಆಳುವ ನೀತಿಯಿಂದ ಇದು ಪ್ರತ್ಯೇಕ ಸ್ವತಂತ್ರ ಧರ್ಮಗಳಾಗಿವೆಯೆಂದು ಭಾವಿಸಿದ್ದೆ. ಸ್ವಾತಂತ್ರ ಬಂದ ಮೇಲೆ ಇವುಗಳು ಬೇರೆಯಾಗಿದ್ದು, ನನಗೆ ಗೊತ್ತಾಗಿದ್ದರೆ ಆ ಕಾಲದಲ್ಲೂ, ಅದಕ್ಕೂ ನಾನು ವಿರೋಧ ವ್ಯಕ್ತಪಡಿಸುತ್ತಿದ್ದೆ’’ ಎಂದು ಹೇಳಿದ್ದಾರೆ. ಇದು ಸೋಜಿಗವಾದ ಹೇಳಿಕೆ !

ಎಲ್ಲವನ್ನೂ ಬ್ರಿಟಿಷರ ತಲೆಗೆ ಕಟ್ಟುವುದು ಸರಿಯಲ್ಲ. ಬ್ರಿಟಿಷರು ದೇಶಬಿಟ್ಟು ಹೋದ 46 ವರ್ಷಗಳ ನಂತರ 1993ರಲ್ಲಿ ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಸ್ವತಂತ್ರ ಧರ್ಮಗಳೆಂದು ಘೋಷಿಸಲಾಗಿದೆ. 67 ವರ್ಷಗಳ ನಂತರ 2014ರಲ್ಲಿ, ಅಂದರೆ ಕೇವಲ 5 ವರ್ಷಗಳ ಹಿಂದೆ ಜೈನರನ್ನು ಸ್ವತಂತ್ರ ಅಲ್ಪ-ಸಂಖ್ಯಾತ ಧರ್ಮೀಯರೆಂದು ಘೋಷಿಸಲಾಗಿದೆ. ದೇಶದ ಸಮಗ್ರ ಆಗುಹೋಗುಗಳ ಬಗ್ಗೆ ಅತ್ಯಂತ ಸಕಾಲಿಕ ಅರಿವು ಹೊಂದಿರುವ ಶ್ರೀಗಳಿಗೆ ಈ ಸಂಗತಿಗಳು ತಿಳಿದಿರಲಿಲ್ಲವೆಂಬುದನ್ನು ನಂಬುವುದಕ್ಕೆ ಕಷ್ಟವಾಗುತ್ತದೆ. ಅಂತಹ ಹೇಳಿಕೆ ಪೂಜ್ಯರಿಗೆ ಸರಿಯೆನಿಸುವುದಿಲ್ಲ. ಇದು ಪಲಾಯನವಾದವಲ್ಲವೇ? ಈಗಲಾದರೂ ಪೇಜಾವರ ಶ್ರೀಗಳು ಆ ಮೂರು ಧರ್ಮಗಳಿಗೆ ನೀಡಿದ ಸ್ಥಾನಕ್ಕೆ ವಿರೋಧ ಮಾಡುತ್ತಾರೆಯೇ?

ಸನ್ಮಾನ್ಯ ಮೋದಿಯವರು ‘‘ಹಿಂದೂ ಎನ್ನುವುದು ಧರ್ಮವಲ್ಲ. ಅದೊಂದು ಜೀವನ ಕ್ರಮ ’’ಎಂದು ಸವೋಚ್ಚ ನ್ಯಾಯಲಯದ ತೀರ್ಪನ್ನು ಉದ್ದರಿಸಿ ಅನೇಕ ಬಾರಿ ಹೇಳಿದ್ದಾರೆ. ಆದರೆ ಪೇಜಾವರ ಶ್ರೀಗಳು ಹಿಂದೂ ಧರ್ಮವನ್ನು ‘ದೇಶವಾಚಕ’ವೆಂದು ವ್ಯಾಖ್ಯಾನಿಸಿ ಹಿಂದೂಯೇತರ ಧರ್ಮಗಳನ್ನೂ ‘ಹಿಂದೂ’ ಎಂದು ಹೇಳಿದ್ದಾರೆ. ಇದು ಇನ್ನೊಂದು ವಿವಾದಕ್ಕೆ ಅವಕಾಶ ಮಾಡಿಕೊಡುತ್ತದೆ. ಆ ಬಗ್ಗೆ ನಾವು ಯಾವುದೇ ವಿಮರ್ಶೆ ಮಾಡುವುದಿಲ್ಲ.

ಕೊನೆಯದಾಗಿ ಬೌದ್ಧ, ಸಿಖ್ ಧರ್ಮಗಳಿಗೆ ಮಾನ್ಯತೆ ನೀಡಿ 25 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ದೇಶದ ಏಕತೆ ಮತ್ತು ಭದ್ರತೆಗೆ ಅವರಿಂದ ಏನಾದರೂ ತೊಂದರೆಯಾಗಿದೆಯೇ? ಲಿಂಗಾಯತರೂ ಅದೇ ಮಾನ್ಯತೆಯನ್ನು ಕೇಳುತ್ತಿದ್ದಾರೆ. ಲಿಂಗಾಯತರ ದೇಶಭಕ್ತಿಗೆ ಐತಿಹಾಸಿಕ ಘಟನೆಗಳೇ ಸಾಕ್ಷಿ. ಅದಾಗ್ಯೂ ಏಕೆ ಪದೇ ಪದೇ ವಿರೋಧವೆಂಬುದು ಅರ್ಥವಾಗುತ್ತಿಲ್ಲ. ಅವರೇ ಹೇಳಿದಂತೆ "ನಾವೆಲ್ಲರೂ ನಮ್ಮ ನಮ್ಮ ಧರ್ಮದ ಬಗ್ಗೆ ಅಭಿಮಾನವನ್ನು ಇಟ್ಟುಕೊಂಡು ‘ದೇಶವಾಚಕ’ ಹಿಂದೂ ಧರ್ಮದ ನೆಲೆಯಲ್ಲಿ ಸಂಘಟಿತರಾಗೋಣ" ಎಂಬುದನ್ನು ಅವರಿಗೆ ನೆನಪಿಸಿ ಲಿಂಗಾಯತರಿಗೂ ಜೈನ, ಬೌದ್ಧ, ಮತ್ತು ಸಿಖ್ ಧರ್ಮಗಳ ರೀತಿಯಲ್ಲಿ ಮಾನ್ಯತೆಯನ್ನು ಶ್ರೀಗಳು ದೊರಕಿಸಿ ಕೊಡಲಿ ಎಂದು ಕೇಳುತ್ತೇವೆ ಮತ್ತು ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ಒಪಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.

-ಎಸ್.ಎಂ.ಜಾಮದಾರ

ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News