ಮನೆ ಕಳ್ಳತನ ಪ್ರಕರಣ: ಆರೋಪಿ ಬಂಧನ, 6 ಲಕ್ಷ ಮೌಲ್ಯದ ಚಿನ್ನಾಭರಣ ವಶ

Update: 2019-09-11 18:40 GMT

ದಾವಣಗೆರೆ, ಸೆ.11: ಮಹಾನಗರ ಪಾಲಿಕೆಯ ಯು.ಜಿ.ಡಿ ಇಂಜಿನಿಯರ್ ಸೋಗಿನಲ್ಲಿ ಮನೆ ಮಾಲಕರ ಗಮನ ಬೇರೆಡೆ ಸೆಳೆದು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು. 

ಭದ್ರಾವತಿಯ ವೇಣುಗೋಪಾಲ ಬಂಧಿತ ಆರೋಪಿ. ಈತನಿಂದ 6 ಲಕ್ಷ ಬೆಲೆ ಬಾಳುವ 175ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಈತನ ಜೊತೆಗೆ ಕಳ್ಳತನಕ್ಕೆ ತೆರಳುತ್ತಿದ್ದ ಉಳಿದ ಇಬ್ಬರು ಆರೋಪಿಗಳ ಪತ್ತೆ ಮಾಡಲು ತಂಡ ರಚನೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.  

ಅ.16 ರಂದು ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತ 2ನೇ ಮೇನ್ ದುರ್ಗಾಂಬಿಕ ಸ್ಕೂಲ್ ಹಿಂಭಾಗದ ಮನೆಗೆ ಪಾಲಿಕೆ ಯು.ಜಿ.ಡಿ ಇಂಜಿನಿಯರ್ ಎಂದು ಪರಿಚಯ ಮಾಡಿಕೊಂಡು, ಮನೆಯ ಬಾತ್‍ಗಳನ್ನು ಟೇಪ್‍ನಲ್ಲಿ ಅಳತೆ ಮಾಡುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಬೆಳ್ಳಿ ಬಂಗಾರದ ಒಡವೆಗಳನ್ನು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.   

ಪ್ರಕರಣ ತನಿಖೆಗಾಗಿ ತಂಡ ರಚಿಸಿ ತನಿಖೆಗೆ ಒಳಪಡಿಸಿದಾಗ ವೇಣುಗೋಪಾಲ ಹಾಗೂ ಇನ್ನಿಬ್ಬರು ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು, ಪ್ರಕರಣವನ್ನು ಪತ್ತೆಮಾಡಲು ಶ್ರಮಿಸಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಶ್ಲಾಘಿಸಿ ನಗದು ಬಹುಮಾನ ಘೋಷಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ರಾಜೀವ್, ಡಿವೈಎಸ್ಪಿ ಎಂ.ಕೆ.ಗಂಗಲ್ ಸೇರಿದಂತೆ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News