'ಕನಿಷ್ಠ ಬೆಂಬಲ ಬೆಲೆ ಏರಿಕೆ, ನೋಟು ರದ್ದತಿ, ಜಿಎಸ್‍ಟಿಯಿಂದ ಜವುಳಿ ಉದ್ಯಮ ಸಂಕಷ್ಟದಲ್ಲಿ'

Update: 2019-09-12 08:48 GMT

ಹೊಸದಿಲ್ಲಿ: ಹತ್ತಿಯ ಕನಿಷ್ಠ ಬೆಂಬಲ ಬೆಲೆಯಲ್ಲಿ ಏರಿಕೆ, ಅಮಾನ್ಯೀಕರಣ ಹಾಗೂ ಜಿಎಸ್‍ಟಿ ಹೇರಿಕೆ ದೇಶದ ಜವುಳಿ ಉದ್ಯಮದ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಉತ್ತರ ಭಾರತ ಟೆಕ್ಸ್ ಟೈಲ್ ಮಿಲ್ ಅಸೋಸಿಯೇಶನ್ ಉಪಾಧ್ಯಕ್ಷ ಮುಕೇಶ್ ತ್ಯಾಗಿ ಹೇಳುತ್ತಾರೆ.

ಕಳೆದ ವರ್ಷ ಸರಕಾರ ಹತ್ತಿಯ ಕನಿಷ್ಠ ಬೆಂಬಲ ಬೆಲೆಯನ್ನು ಮೊದಲ ಬಾರಿಗೆ ಶೇ25ರಿಂದ ಶೇ 28ಕ್ಕೆ ಏರಿಕೆ ಮಾಡಿರುವುದನ್ನು ಅರಗಿಸಿಕೊಳ್ಳಲು ಜವುಳಿ ಉದ್ಯಮಕ್ಕೆ ಕಷ್ಟವಾಗಿದೆ, ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ನಾಲ್ಕಾರು ತಿಂಗಳುಗಳಲ್ಲಿ ಹತ್ತಿಯ ಬೆಲೆ ಏರಿಕೆಯಾಗಬಹುದೆಂಬ ನಿರೀಕ್ಷೆ ಬುಡಮೇಲಾಗಿ ಬೆಲೆಗಳಲ್ಲಿ ತೀರಾ ಇಳಿಕೆಯಾಗಿದ್ದು ಉತ್ಪಾದನಾ ವೆಚ್ಚ ಹೆಚ್ಚಾಗಿ ಸಮಸ್ಯೆ ಎದುರಾಗಿದೆ ಎಂದು ಅವರು ವಿವರಿಸುತ್ತಾರೆ. ಭಾರತದ ಒಟ್ಟು ಶೇ 40ರಷ್ಟು ಹತ್ತಿ ನೂಲಿನ ರಫ್ತನ್ನು ಪಡೆಯುತ್ತಿದ್ದ ಚೀನಾ ಈಗ ತನ್ನದೇ ಕಡಿಮೆ ಬೆಲೆಗೆ ಲಭ್ಯವಿರುವ ನೂಲು ಉಪಯೋಗಿಸುತ್ತಿದೆ. ವಿಯೆಟ್ನಾಂನಂತಹ ದೇಶಗಳು ಶೇ 3.5ರಷ್ಟು ಆಮದು ಸುಂಕ ಕೂಡ ಪಾವತಿಸಬೇಕಾಗಿಲ್ಲವಾದುದರಿಂದ ಹತ್ತಿಯನ್ನು ಚೀನಾಗೆ ಮಾರಾಟ ಮಾಡುತ್ತಿದೆ ಎಂದು ತ್ಯಾಗಿ ಹೇಳಿದ್ದಾರೆ.

ಹಿಂದೆ ನೂಲಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲವಾದರೂ ಈಗ ಶೇ 5 ಜಿಎಸ್‍ಟಿಯನ್ನು ನೂಲು ಹಾಗೂ ಬಟ್ಟೆ ಮೇಲೆ ವಿಧಿಸಲಾಗುತ್ತದೆ. ಮೇಲಾಗಿ ರೈತರು ಹತ್ತಿಯನ್ನು ಕೃಷಿ ಮಾರುಕಟ್ಟೆ ತರುವಾಗ ವಿಧಿಸಲಾಗುವ ಶೇ 2.5ರಷ್ಟು ಮಂಡಿ ತೆರಿಗೆ ನಮಗೆ ವಾಪಸ್ ನೀಡಲಾಗುತ್ತಿಲ್ಲ.

ತಮ್ಮ ಸಂಘಟನೆ ಸರಕಾರದ ಜತೆ ಜವುಳಿ ಉದ್ಯಮದ ಸಮಸ್ಯೆಯ ಬಗ್ಗೆ ಹೇಳುತ್ತಲೇ ಇದೆ, ಮಾಧ್ಯಮಗಳು ಆಟೋಮೊಬೈಲ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳ ಬಿಕ್ಕಟ್ಟಿನ ಬಗ್ಗೆ ಹೇಳಿಕೊಳ್ಳುತ್ತಿವೆ. ಆದರೆ 10 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಿಗಳಿರುವ ಜವುಳಿ ಉದ್ಯಮದ ಸಂಕಷ್ಟದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News