10 ಬ್ಯಾಂಕ್ ಗಳ ವಿಲೀನ ವಿರುದ್ಧ ಬ್ಯಾಂಕ್ ಅಧಿಕಾರಿಗಳ ಸಂಘದಿಂದ ರಾಷ್ಟ್ರಾದ್ಯಂತ ಬಂದ್ ಬೆದರಿಕೆ

Update: 2019-09-12 15:06 GMT

ಹೊಸದಿಲ್ಲಿ,ಸೆ.12: ಹತ್ತು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ನಾಲ್ಕಕ್ಕೆ ಇಳಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಸೆಪ್ಟಂಬರ್ 26ರಿಂದ ಎರಡು ದಿನಗಳ ಬಂದ್ ಆಚರಿಸುವುದಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧಿಕಾರಿಗಳ ನಾಲ್ಕು ಸಂಘಗಳು ಬೆದರಿಕೆ ಹಾಕಿವೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಲೀನಗಳು ಮತ್ತು ಸಂಯೋಜನೆಗಳ ವಿರುದ್ಧ ಪ್ರತಿಭಟಿಸಲು ಬಂದ್ ಆಚರಿಸಲು ಪ್ರಸ್ತಾವಿಸಲಾಗಿದೆ ಎಂದು ಅಧಿಕಾರಿಗಳ ಸಂಘ, ಭಾರತೀಯ ಬ್ಯಾಂಕ್‌ಗಳ ಸಂಘಕ್ಕೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದೆ. ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಕೃತ ಬ್ಯಾಂಕ್‌ ಗಳು ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಬಂದ್ ಆಚರಿಸಲಿವೆ ಎಂದು ಸಂಘದ ನಾಯಕರು ತಿಳಿಸಿದ್ದಾರೆ.

ಕೇಂದ್ರ ಸರಕಾರ ಆಗಸ್ಟ್ 30ರಂದು ಸಾರ್ವಜನಿಕ ವಲಯದ ಹತ್ತು ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ನಾಲ್ಕಕ್ಕೆ ಇಳಿಸುವ ಘೋಷಣೆ ಮಾಡಿತ್ತು. ಬಂದ್ ನೋಟಿಸನ್ನು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‌ಬಿಒಸಿ) ಮತ್ತು ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಎನ್‌ಒಬಿಒ) ಜಂಟಿಯಾಗಿ ಜಾರಿ ಮಾಡಿದೆ. ವಾರದಲ್ಲಿ ಐದು ದಿನ ಕೆಲಸ, ನಗದು ವ್ಯವಹಾರ ಅವಧಿಯಲ್ಲಿ ಕಡಿತ ಮತ್ತು ನಿಯಂತ್ರಿತ ಕೆಲಸ ಸಮಯ ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಗಳು ಸರಕಾರದ ಮುಂದಿಟ್ಟಿದೆ.

ಕೇಂದ್ರ ಸರಕಾರ ಬ್ಯಾಂಕಿಂಗ್ ವಲಯದಲ್ಲಿ ನಡೆಸುತ್ತಿರುವ ವಿಲೀನ ಮತ್ತು ಸಂಯೋಜನೆಯ ವಿರುದ್ಧ ಹಾಗೂ ಉದ್ಯೋಗಿಗಳ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತವಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೆಪ್ಟಂಬರ್ 25ರ ಮಧ್ಯರಾತ್ರಿಯಿಂದ ಸೆಪ್ಟಂಬರ್ 27ರ ಮಧ್ಯರಾತ್ರಿವರೆಗೆ ಬಂದ್ ಆಚರಿಸಲಿದೆ ಎಂದು ಎಐಬಿಒಸಿಯ ಪ್ರಧಾನ ಕಾರ್ಯದರ್ಶಿ (ಚಂಡೀಗಡ) ದೀಪಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಈ ಸಂಯೋಜನೆ ಪ್ರಕ್ರಿಯೆಯ ಪ್ರಕಾರ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸನ್ನು ಪಂಜಾಬ್ ನ್ಯಾಶನಲ್ ಬ್ಯಾಂಕ್ ಜೊತೆ ವಿಲೀನಗೊಳಿಸಲಾಗುವುದು. ಆಮೂಲಕ ಪಿಎನ್‌ಬಿ ದೇಶದ ಸಾರ್ವಜನಿಕ ವಲಯದ ಎರಡನೇ ಬೃಹತ್ ಬ್ಯಾಂಕ್ ಆಗಲಿದೆ.

ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕನ್ನು ಇಂಡಿಯನ್ ಬ್ಯಾಂಕ್ ಜೊತೆ ವಿಲೀನಗೊಳಿಸಲಾಗುವುದು. ಆಂಧ್ರ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವನ್ನು ಪರಸ್ಪರ ಸಂಯೋಜಿಸಲಾಗುವುದು. 2017ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆ ಆರು ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗಿತ್ತು. ಇದರಿಂದ ಎಸ್‌ಬಿಐ ಭಾರತದ ಅತೀದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿದೆ. ನಂತರದ ವರ್ಷದಲ್ಲಿ ವಿಜಯಾ ಬ್ಯಾಂಕ್ ಮತ್ತು ದೇನ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನಗೊಳಿಸಲಾಗಿತ್ತು. ಸರಕಾರಿ ಸ್ವಮ್ಯದ ಬ್ಯಾಂಕ್‌ಗಳನ್ನು ಜಾಗತಿಕ ಸ್ಪರ್ಧೆಗೆ ಸಮರ್ಥಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರ 2017ರಲ್ಲಿ ವಿಲೀನ ಪ್ರಕ್ರಿಯೆಯ ಮೂಲಕ 19 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು 12ಕ್ಕೆ ಇಳಿಸಿತ್ತು. ಇದೀಗ ಆಗಸ್ಟ್ 30ರಂದು ಘೋಷಿಸಿರುವ ವಿಲೀನ ಮತ್ತು ಸಂಯೋಜನೆಯಲ್ಲಿ ಈ ಸಂಖ್ಯೆಯನ್ನು ನಾಲ್ಕಕ್ಕೆ ಇಳಿಸಲು ಸರಕಾರ ಚಿಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News