ಐಬಿಪಿಎಸ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಸಿಗದ ಅವಕಾಶ: ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶ

Update: 2019-09-13 13:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.13: ರಾಜ್ಯದಲ್ಲಿನ 953 ಹುದ್ದೆ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟು 12,071 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(ಐಬಿಪಿಎಸ್)ಯು ಗುರುವಾರ ಅರ್ಜಿಗಳನ್ನು ಆಹ್ವಾನಿಸಿದ್ದು, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದರು. ಈ ಸಂಬಂಧ ಸಂಸತ್ತಿನಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಹಾಗೂ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು.

ಆದರೂ, ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದೇ ಇರುವುದರಿಂದ ಕನ್ನಡಿಗರಿಗೆ ಮತ್ತೊಮ್ಮೆ ಅನ್ಯಾಯವಾಗಿದೆ. ಈಗಾಗಲೇ ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನ್ಯ ರಾಜ್ಯಗಳ ಸಿಬ್ಬಂದಿಗಳೇ ಹೆಚ್ಚಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಹಕರು ಪ್ರತಿನಿತ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಕನ್ನಡಪರ ಸಂಘಟನೆಗಳ ಪ್ರಬಲ ಒತ್ತಾಯಕ್ಕೆ ಮಣಿಯದ ಕೇಂದ್ರ ಸರಕಾರದ ಕನ್ನಡ ವಿರೋಧಿ ನೀತಿಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ನಾಡು-ನುಡಿ ಬಗೆಗಿನ ಮಲತಾಯಿ ಧೋರಣೆಯಿಂದ ಕೇಂದ್ರ ಸರಕಾರ ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕುತ್ತಿದೆ. ಹಿಂದಿ ಹೇರಿಕೆ, ನಾಡ ಧ್ವಜಕ್ಕೆ ಅಡ್ಡಗಾಲು, ನೆರೆ ಪರಿಹಾರದಲ್ಲಿ ನಿರ್ಲಕ್ಷ. ಕರ್ನಾಟಕದ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ. ಕನ್ನಡಿಗರ ಔದಾರ್ಯ ಮತ್ತು ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಿಂದ ಇಪ್ಪತ್ತೈದು ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯದೇ ಸರಕಾರವಿದೆ. ಹೀಗಿದ್ದರೂ ಐಬಿಪಿಎಸ್ ಪರೀಕ್ಷೆಯಲ್ಲಿ ರಾಜ್ಯದ ಪರೀಕ್ಷಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗದಿರುವುದು ಕನ್ನಡಿಗರಿಗೆ ಬಗೆದ ದ್ರೋಹ. ಕನ್ನಡಿಗರು ಇದನ್ನು ಸಹಿಸರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಿಂದಿ ಭಾಷೆಯೇತರರು ಬ್ಯಾಂಕುಗಳಲ್ಲಿ ಉದ್ಯೋಗ ಪಡೆಯುವುದನ್ನು ತಡೆಯಲು ನಡೆಸುತ್ತಿರುವ ಷಡ್ಯಂತ್ರವಿದು. ಭಾಷಾ ವೈವಿಧ್ಯತೆಯ ಬಗ್ಗೆ ಬಿಜೆಪಿಗೆ ನಾವು ಪಾಠ ಮಾಡಬೇಕಿದೆ. ನಾಡು ನುಡಿ ಜನರ ಮೇಲಿಲ್ಲದ ಬದ್ಧತೆ ಇನ್ನೇತಕ್ಕಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

2014ಕ್ಕೂ ಮೊದಲು ಸ್ಥಳೀಯ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಕನ್ನಡ ಕಲಿತಿರುವಿಕೆ ಕಡ್ಡಾಯವಿತ್ತು. ಹಿಂದಿ ಹೇರಿಕೆ ಹುನ್ನಾರದಿಂದ ಕನ್ನಡಿಗರ ಉದ್ಯೋಗವನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯ ಸರಕಾರ ಕನ್ನಡಿಗರಿಗಾಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ಆಗ್ರಹಿಸಿದೆ.

ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರಕಾರ ಐಬಿಪಿಎಸ್(IBPS) ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ ‘domicile ನಿಯಮವನ್ನು ವಾಪಸ್ ತರಲಾಗಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News