ನಾರಾಯಣ ಗುರುಗಳನ್ನು ಜಾತಿಗೆ ಸೀಮಿತಗೊಳಿಸದಿರಿ: ಬಸವರಾಜ ಹೊರಟ್ಟಿ

Update: 2019-09-13 16:27 GMT

ಧಾರವಾಡ, ಸೆ.13: ಸಮಾಜದ ಶಾಂತಿ, ಧರ್ಮ, ಸಂಸ್ಕೃತಿ, ಭಾವೈಕ್ಯತೆ, ಸಮಾನತೆ ಮತ್ತು ಸಾಮರಸ್ಯಗಳಿಗಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಯಾವುದೇ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಿ, ಅವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಬೇಡಿ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಸೋಮವಾರ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳು ಕೇರಳದ ಪುಟ್ಟಗ್ರಾಮದಿಂದ ಬಂದು ನಾಡಿಗೆ ಶಾಂತಿ, ಸಾಮರಸ್ಯ, ಸಹಬಾಳ್ವೆಯ ಶಾಶ್ವತ ಸಂದೇಶ ನೀಡಿದರು. ಅವರಂತೆ ಬಸವಣ್ಣ, ವಾಲ್ಮೀಕಿ, ಗಾಂಧೀಜಿ, ಅಂಬೇಡ್ಕರ್ ಮುಂತಾದ ಮಹಾತ್ಮರು ಅನೇಕ ಜೀವನ ಮೌಲ್ಯಗಳನ್ನು ಸಾರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಣ್ಣ ಜಾತಿ ಸಮುದಾಯದವರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ಅವರು ಹೇಳಿದರು.

ಒಳ್ಳೆಯದನ್ನು ಗುರುತಿಸುವ, ಪರೋಪಕಾರ, ಸಹಿಷ್ಣುತೆ ಗುಣಗಳು ಮೂಡಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವಂತೆ ಆಗಬೇಕು. ಅಂದಾಗ ಮಾತ್ರ ಮಹಾತ್ಮರ ಜಯಂತಿಗಳ ಆಚರಣೆಗೆ ಅರ್ಥ ಬರುತ್ತದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ನಾರಾಯಣ ಗುರುಗಳ ‘ಜೀವನ ಮತ್ತು ಸಾಧನೆ’ ವಿಷಯದ ಕುರಿತು ಉದಯ ಆರ್.ನಾಯ್ಕಿ ವಿಶೇಷ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಬಸವರಾಜ ದುಬ್ಬನಮರಡಿ, ವಿವಿಧ ಸಮಾಜಗಳ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News